ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ವಿಜಯವನ್ನು ದೊರಕಿಸಿಕೊಟ್ಟ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು .
ಚಂಡೀಗಢದ ರಾಜಭವನದಲ್ಲಿಂದು ರಾಜ್ಯಪಾಲ ವಿ ಪಿ ಸಿಂಗ್ ಬದನೋರ್ ಅವರು ಅಮರೀಂದರ್ ಸಿಂಗ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಳೆದ ಮಾರ್ಚ್ 11ರಂದು ವಿಧಾನಸಭಾ ಚುನಾವಣೆ ಫಲಿತಾಂಶಗಳು ಪ್ರಕಟಗೊಂಡ ದಿನ ಅಮರೀಂದರ್ ಅವರು 75 ರ ಹರೆಯವನ್ನು ಪೂರೈಸಿದ್ದರು. ಇಂದು ಸಿಂಗ್ ಅವರು ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರೊಂದಿಗೆ ಇತರ 9 ಮಂದಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನವಜ್ಯೋತ್ ಸಿಂಗ್ ಸಿಧು, ಮನ್‌ಪ್ರೀತ್ ಸಿಂಗ್ ಬಾದಲ್ ಅವರು ಕೂಡ ಪಂಜಾಬ್ ಸರಕಾರದ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪಂಜಾಬ್ ನಲ್ಲಿನ ಕಾಂಗ್ರೆಸ್ ವಿಜಯವನ್ನು ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸಬಾರದೆಂದು ಅಮರೀಂದರ್ ಸಿಂಗ್ ಅವರು ಈ ಮೊದಲೇ ಪಕ್ಷದ ಎಲ್ಲ ಶಾಸಕರನ್ನು ಕೇಳಿಕೊಂಡಿದ್ದರು.
177 ಸದಸ್ಯ ಬಲ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 77 ಸ್ಥಾನಗಳನ್ನು ಗೆದ್ದುಕೊಂಡು ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಏರಿದೆ.