ಕಪಿತಾನಿಯೋ: ಕಪಿತಾನಿಯೋ ಬಳಿ ಕುಡಿಯುವ ನೀರಿನ ಕೊಳವೆಯೊಂದು ಕಳೆದ ಒಡೆದು ಹಲವು ದಿನಗಳಿಂದ ನೀರು ಪೋಲಾಗುತ್ತಿದ್ದು, ಸಂಬಂಧಪಟ್ಟವರು ಈ ಬಗ್ಗೆ ಮಾಹಿತಿ ನೀಡಿದರೂ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಮಾರ್ಟ್ ಸಿಟಿ ವತಿಯಿಂದ ಪಡೀಲ್ -ಪಂಪ್‌ವೆಲ್ ನಡುವಿನ ರಸ್ತೆ ಕಾಮಗಾರಿ ಇಲ್ಲಿ ನಡೆಯುತ್ತಿದ್ದು, ಒಂದು ತಿಂಗಳ ಹಿಂದೆ ಇಲ್ಲಿ ಕಾಮಗಾರಿಗಾಗಿ ನೆಲವನ್ನು ಅಗೆಯುತ್ತಿರುವಾಗ ನಗರಕ್ಕೆ ನೀರು ಪೂರೆಕೆಯಾಗುವ ಮುಖ್ಯ ಕೊಳವೆ ಪೈಪ್ ಒಡೆದು ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿತ್ತು. ಬಳಿಕ ಅದನ್ನು ದುರಸ್ತಿಗೊಳಿಸಲಾಗಿತ್ತು.
ಇದೀಗ ಮತ್ತೆ 15 ದಿನಗಳಿಂದ ನೀರಿನ ಸೋರಿಕೆ ಕಂಡುಬರುತ್ತಿದ್ದು, ಈ ಮೊದಲು ನೀರು ಸೋರಿಕೆ ಸಂದರ್ಭ ತೆಗೆಯಲಾಗಿದ್ದ ಗುಂಡಿಯಲ್ಲಿ ನೀರು ತುಂಬಿದೆ. ನೆಲದಡಿಯಲ್ಲಿ ಮತ್ತೆ ಪೈಪ್ ಒಡೆದಿರುವ ಸಾಧ್ಯತೆಯಿದ್ದು, ತತ್‌ಕ್ಷಣ ದುರಸ್ತಿ ಮಾಡುವ ಅಗತ್ಯವಿದೆ. ಈಗಾಗಲೇ ನಗರದ ವಿವಿಧೆಡೆ ನೀರಿನ ಸಮಸ್ಯೆ ಎದುರಾಗುತ್ತಿದ್ದು, ತುಂಬೆಯಲ್ಲಿ ನೀರಿನ ಒಳ ಹರಿವು ಕಡಿಮೆಯಾಗಿರುವುದರಿಂದ ಬೇಸಗೆಯಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆಯಿದೆ.
ಪರಿಸ್ಥಿತಿ ಹೀಗಿರುವಾಗ ನೀರು ಪೋಲಾಗುವುದನ್ನು ತಡೆಯುವ ಅಗತ್ಯವಿದೆ. ಮೇಯರ್, ಪಾಲಿಕೆ ಸದಸ್ಯರಿಗೆ ತಿಳಿಸಿದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ತತ್ ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪೈಪ್‌ನಲ್ಲಿ ಉಂಟಾಗುತ್ತಿರುವ ಸೋರಿಕೆ ತಡೆಗಟ್ಟಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.