ಕೋಲ್ಕತಾ: ಅತ್ಯಾ*ಚಾರ ಆರೋಪಿಗೆ ಮರಣದಂಡನೆ ಶಿಕ್ಷೆ(Capital Punishment) ವಿಧಿಸುವ ಬಗ್ಗೆ ಪಶ್ಚಿಮಬಂಗಾಳದಲ್ಲಿ ಅತ್ಯಾ*ಚಾರ ನಿಗ್ರಹ ಮಸೂದೆಯನ್ನು ಜಾರಿಗೊಳಿಸುವುದಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjeee) ಬುಧವಾರ (ಆಗಸ್ಟ್ 28) ಘೋಷಿಸಿದ್ದಾರೆ.
ಆಗಸ್ಟ್ 9ರಂದು ಕೋಲ್ಕತಾದ ಆರ್ ಜಿ (RJ Kar Medical collage) ಮೆಡಿಕಲ್ ಕಾಲೇಜಿನ ಟ್ರೈನಿ ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಲೆಗೈದ ಘಟನೆ ವಿರುದ್ಧ ತೀವ್ರ ಪ್ರತಿಭಟನೆ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹೇಳಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ನಾವು ರಾಜ್ಯದಲ್ಲಿ ಅತ್ಯಾ*ಚಾರ ನಿಗ್ರಹ ಕಾಯ್ದೆಯ ಮಸೂದೆಯನ್ನು ಪಾಸ್ ಮಾಡಲಿದ್ದು, ಈ ಹೊಸ ಮಸೂದೆಯಲ್ಲಿ ಇಂತಹ ಅಪರಾಧ ನಡೆದ ಏಳು ದಿನದೊಳಗೆ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶವಿರಲಿದೆ ಎಂದು ಬ್ಯಾನರ್ಜಿ ಹೇಳಿದರು.
ಮುಂದಿನ ವಾರ ನಾವು ವಿಧಾನಸಭೆ ಕಲಾಪವನ್ನು ಕರೆದು, ಹತ್ತು ದಿನದೊಳಗೆ ಮಸೂದೆಯನ್ನು ಅಂಗೀಕರಿಸಿ, ಮಸೂದೆಯನ್ನು ಗವರ್ನರ್ (ಸಿವಿ ಆನಂದ್ ಬೋಸ್)ಗೆ ಕಳುಹಿಸಲಾಗುವುದು. ಒಂದು ವೇಳೆ ಅದನ್ನು ಅಂಗೀಕರಿಸದಿದ್ದರೆ, ನಾವು ರಾಜಭವನದ ಹೊರಗೆ ಕುಳಿತು ಧರಣಿ ಕುಳಿತುಕೊಳ್ಳುತ್ತೇವೆ. ಈ ಮಸೂದೆಯನ್ನು ಅಂಗೀಕರಿಸಲೇಬೇಕು, ಈ ಸಮಯದಲ್ಲಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷವು ಪಶ್ಚಿಮಬಂಗಾಳದ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದ್ದು, ಟ್ರೈನಿ ವೈದ್ಯೆಯ ಸಾವಿನ ಪ್ರಕರಣದಲ್ಲಿ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದರು.