ಜಗತ್ತಿನ ಪ್ರಸಿದ್ಧ ಉದ್ಯಮಶೀಲ ನಾಯಕಿ ಇಂದಿರಾ ನೂಯಿ ಹೇಳಿದ್ದು ನೆನಪಾಗುತ್ತದೆ “ಆಕೆಗೆಲ್ಲವೂ ಸಿಗಲಾರದು’ (She doesn’t get everything) ಇಲ್ಲಿ “ಆಕೆ’ ಎಂದರೆ ಹೆಣ್ಣು. ನನಗಿದು ತುಂಬ ಬೇಸರ ತರುತ್ತದೆ. ಆಕೆಯಾದರೇನು, ಆತನಾದರೇನು? ಬದುಕು, ಕನಸು, ಅವರವರ ಜವಾಬ್ದಾರಿಗಳು ಎಲ್ಲರಿಗೂ ಒಂದೇ ಆಗಬೇಕಲ್ಲವೆ? ಆಕೆಗೆ ಯಾಕೆ ಎಲ್ಲವೂ ಸಿಗಲಾರದು?
ಕೆಲಸವೆಷ್ಟೇ ಸುಲಭದ್ದಾಗಿರಲಿ, ಕಷ್ಟವಿರಲಿ, ಎಷ್ಟೇ ಬುದ್ಧಿಮತ್ತೆಯನ್ನು ಅಪೇಕ್ಷಿಸುತ್ತಿರಲಿ, ಸಾಧಾರಣದ್ದಾಗಿರಲಿ- ಪ್ರತಿ ಕೆಲಸಕ್ಕೊಂದು ಶಿಸ್ತುಪಾಲನೆ, ಸಮಯ ನಿರ್ವಹಣೆ ಅಂತ ಇರುತ್ತದೆ. ಸೂಕ್ಷ್ಮವಾಗಿ ನೋಡಿದರೆ, ಇವೆಲ್ಲದರಲ್ಲಿಯೂ ಮಹಿಳಾ ಸಿಬ್ಬಂದಿಗಳದ್ದೇ ಎತ್ತಿದ ಕೈ. ಬಹುಕಾರ್ಯವನ್ನು ನಿರ್ವಹಿಸುವ ಚೈತನ್ಯವೆನ್ನುವುದು- ಹೆಣ್ಣಿಗೆ ನೀಡಿದ ವರ ಎನ್ನಬೇಕು. ಈ ಎಲ್ಲ ಗುಣಗಳಿಂದ ಹೆಚ್ಚಿನ ಮಹಿಳೆಯರು ತಮ್ಮ ಕಾರ್ಯಕ್ಷೇತ್ರದಲ್ಲಿ ಬಹು ಬೇಗನೆ ಗುರುತಿಸಲ್ಪಡುತ್ತಾರೆ. ಮನೆವಾರ್ತೆ, ಮನೆಯೊಳಗಿನ ಸಮಸ್ಯೆಗಳು ಹೆಣ್ಣುಮಕ್ಕಳನ್ನು ಕಾಡುವಷ್ಟು ಮನೆಯ ಬೇರೆ ಸದಸ್ಯರನ್ನು ಕಾಡುವುದಿಲ್ಲ. ಮನೆಗೆಲಸದ ಒತ್ತಡದಿಂದಾಗಿ, ಕೆಲವೊಮ್ಮೆ ಹೆಚ್ಚಿನ ಸಾಮರ್ಥ್ಯ ಇರುವ ಹೆಣ್ಣು ಕೂಡ ಗಂಡಿನಷ್ಟು ಸಮಾನಾಂತರವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮನೆಯ ಸಮಸ್ಯೆಗಳು ಸಾಮಾನ್ಯವೇ. ಆದರೆ, ಎಲ್ಲ ಮಹಿಳೆಯರಿಗೆ ಒಂದೇ ತೆರನಾಗಿ ಇರುವುದಿಲ್ಲ. ಪ್ರತಿ ಮಹಿಳೆಯೂ ತನ್ನ ವೈಯಕ್ತಿಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ತನ್ನದೇ ಆದ ರೀತಿಯಲ್ಲಿ ಮಾನಸಿಕ ಸಾಮರ್ಥ್ಯ ಹೊಂದಿದ್ದಾಳೆ.
ಇಷ್ಟಾಗಿಯೂ ಮಹಿಳೆ ಯಾವುದೇ ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತುಕೊಳ್ಳಲು ಅದೇ ಸ್ಥಾನಾಪೇಕ್ಷಿತ ಗಂಡಿಗಿಂತ ಹೆಚ್ಚು ಸ್ಪರ್ಧಿಸುವ ಅಗತ್ಯ ಬರುವುದೇಕೆ? ಕೆಲವೊಮ್ಮೆ, ಮನೆಯ ಸಮಸ್ಯೆಗಳಿಂದಾಗಿ ಆಕೆ ಉದ್ಯೋಗದ ಸ್ಥಳದಲ್ಲಿ ನಿರ್ಲಕ್ಷ್ಯ ತೋರಬಹುದೆಂಬ ಅಭಿಪ್ರಾಯವನ್ನು ಯಾಕೆ ಸೃಷ್ಟಿಸಬೇಕು? ಅಲ್ಲದೆ, ಹೆಣ್ಣುಮಗಳೊಬ್ಬಳ ಕೈ ಕೆಳಗೆ ಕೆಲಸ ಮಾಡಲು ಗಂಡಸರಿಗೇಕೆ ಕೀಳರಿಮೆ? ಗಂಡುಮಕ್ಕಳು ಹೆಣ್ಣುಮಕ್ಕಳ ಕೈಕೆಳಗೆ ಕೆಲಸ ಮಾಡಲು ಇಷ್ಟಪಡಲಾರರು ಎಂದು ಸಂಸ್ಥೆಯ ಧಣಿಗಳೇಕೆ ಊಹಿಸಬೇಕು?
ಇಂಥ ಸ್ಪರ್ಧೆಗಳಲ್ಲಿ ತೇರ್ಗಡೆ ಹೊಂದಿ ಎಲ್ಲೋ ಆಕೆ ಜವಾಬ್ದಾರಿಯುತ ಹುದ್ದೆಯಲ್ಲಿ ಆಸೀನಳಾದಳೆಂದು ಭಾವಿಸಿ. ನೂರಾರು ಕಣ್ಣುಗಳು ಆಕೆಯನ್ನೇ ಕುತೂಹಲದಿಂದ ಗಮನಿಸುತ್ತವೆ. ಕಪೋಲಕಲ್ಪಿತ ಸಂಬಂಧಗಳ ಕತೆಗಳು ಹುಟ್ಟಿಕೊಳ್ಳುತ್ತವೆ. ಆಕೆಯ ವೈಯಕ್ತಿಕ ಜೀವನದ ಹಿನ್ನೆಲೆಯನ್ನು ಅರಿಯುವ ತವಕ ಹೆಚ್ಚಾಗುತ್ತದೆ. ಯಶಸ್ವಿಯಾದ ಗಂಡಿನಲ್ಲಿ ಕಾಣದ ಅನುಮಾನಗಳು, ಕುತೂಹಲಗಳು ಹೆಣ್ಣಾದವಳಲ್ಲಿ ಕಾಣಿಸುವುದೇಕೆ ಎಂಬುದು ನನ್ನ ಮುಖ್ಯ ಪ್ರಶ್ನೆ.
ಪುರಾಣಗಳಲ್ಲಿ, ಚರಿತ್ರೆಯಲ್ಲಿ ಸವಾಲುಗಳು ಎದುರಾದಾಗ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹೆಣ್ಣು ಗಂಡಿಗಿಂತ ಹೆಚ್ಚಿನ ಸಾಮರ್ಥ್ಯ ಉಳ್ಳವಳು ಎಂದು ತೋರಿಸಿಕೊಟ್ಟಿದ್ದಾಳೆ. ಹಾಗೆಂದು, ಹೆಣ್ಣಿನ ಕಷ್ಟ ಕೇವಲ ಈ ಸ್ಪರ್ಧೆಗಳಿಗೆ ಸೀಮಿತವಲ್ಲ. ಒಂದು ವೇಳೆ ತಮ್ಮ ಮನೆಯ ಪರಿಸ್ಥಿತಿ ಅನುಕೂಲಕರವಾಗಿದ್ದರೆ ಎಲ್ಲ ಮಹಿಳೆಯರು ಹೊಣೆಗಾರಿಕೆಯ ಸ್ಥಾನಗಳಿಗೆ ಸ್ಪರ್ಧೆಗಿಳಿದು ಬಿಡುತ್ತಿದ್ದರೇನೋ! ನಮ್ಮ ಕೌಟುಂಬಿಕ ವ್ಯವಸ್ಥೆ ಮನೆವಾರ್ತೆಗಳಲ್ಲಿ ಮಹನೀಯವಾದ ರಿಯಾಯಿತಿಯನ್ನು ಹೆಣ್ಣಿಗೆ ನೀಡಿಲ್ಲ. ಅದನ್ನು ಇಂದಿರಾ ನೂಯಿಯಂತಹ ಮಹಿಳೆಯರೂ ಅನುಭವಿಸುತ್ತಾರಾದರೆ ಸಾಮಾನ್ಯ ಹೆಣ್ಣುಮಗಳ ಪಾಡೇನು? ಗಂಡಸಾದವನು ಮನಗೆಲಸಗಳಲ್ಲಿ ಪಾಲ್ಗೊಳ್ಳಲೇ ಬೇಕೆಂದಿಲ್ಲ. ಉದ್ಯೋಗದ ಒತ್ತಡದ ನಡುವೆಯೂ ಎಲ್ಲ ಮನೆವಾರ್ತೆಗಳ ಜವಾಬ್ದಾರಿಯನ್ನು ಹೊರಬೇಕಾದ ಪರಿಸ್ಥಿತಿ ಹೆಣ್ಣಿನ ಪಾಲಿಗೇ ಇರುತ್ತದೆ. ಕೆಲವೊಮ್ಮೆ ಆಕೆಗೆ ಸಹಾಯ ಮಾಡಿದರೆ ಗಂಡಿನ ಹೊಣೆ ಮುಗಿದುಹೋಯಿತು.
ಗಣಪತಿಯನ್ನು ಬೆಳೆಸುವ ಜವಾಬ್ದಾರಿಯನ್ನು ಪಾರ್ವತಿಗೆ ವಹಿಸಿದ ಪರಮೇಶ್ವರ ತಪಸ್ಸಿಗೆ ತೆರಳುತ್ತಾನೆ. ಮರಳಿ ಬಂದಾಗ ಏನೂ ಪ್ರಶ್ನಿಸಿದೆ ಆತನನ್ನು ಎದುರುಗೊಳ್ಳಬೇಕಾದ ಅನಿವಾರ್ಯತೆ ಪಾರ್ವತಿಗೆ. ಲಕ್ಷ್ಮೀದೇವಿ ನಾರಾಯಣನ ಪಾದಸೇವೆಯಲ್ಲಿಯೇ ಸದಾ ನಿರತಳು. ಪ್ರಕೃತಿಯು ಹೆಣ್ಣಿಗೆ ತಾಯ್ತನವೆಂಬ ಭಾಗ್ಯವನ್ನು ಕರುಣಿಸಿದೆ. ಹಾಗಾಗಿ, ಮನೆ-ಮಕ್ಕಳ ವ್ಯಾಮೋಹ ಅವಳಿಗೆ ಸ್ವ-ಭಾವದಿಂದಲೇ ಬಂದಿರಬೇಕು. ಅದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಗಂಡಿಗೆ ಬೇಕು.
ತನ್ನ ವ್ಯಕ್ತಿತ್ವದ ಜೈವಿಕ ಕಾರಣದಿಂದ ತಾಯಿಯಾದ ಆಕೆ, ಬಹುಕಾರ್ಯಗಳ ಸಾಮರ್ಥ್ಯ ಹಾಗೂ ಎಲ್ಲರನ್ನೂ ಸಂಭಾಳಿಸುವ ಚೈತನ್ಯವನ್ನು ಗಂಡಿಗಿಂತ ಹೆಚ್ಚಾಗಿ ಪಡೆದಿರುತ್ತಾಳೆ ತಾನೆ! ಹಾಗಾದರೆ, ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿ ಆಕೆಗೆ ಪ್ರಾಶಸ್ತ್ಯ ಸಿಗಬೇಕಾಗಿರುವುದು ಅಗತ್ಯ.”ಆಕೆಗೂ ಎಲ್ಲವೂ ಸಿಗಲಿ’ ಎಂಬ ಹಂಬಲ ಅತಿ ಆಸೆಯಲ್ಲ.
– ರಶ್ಮಿ ಕುಂದಾಪುರ