Advertisement
“ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಬಿಎಂಆರ್‌ಸಿಯು ತಾತ್ಕಾಲಿಕವಾಗಿ 16 ಸಾವಿರ ಮೀ. ಜಾಗ ಹಾಗೂ 2,500 ಮೀ. ಶಾಶ್ವತ ಭೂಮಿಗಾಗಿ ಮನವಿ ಮಾಡಿದೆ,’ ಎಂದು 2017ರ ಜು.24ರಂದು ನೈರುತ್ಯ ರೈಲ್ವೆ ಸ್ಪಷ್ಟೀಕರಣ ನೀಡಿತ್ತು. ಇದೀಗ “ನಮಗೆ ಪ್ರಸ್ತಾವನೆ ಬಂದೇ ಇಲ್ಲ’ ಎಂದು ವಿಭಾಗೀಯ ಕಚೇರಿ ತಿಳಿಸಿರುವುದರಿಂದ ವಿವಾದ ಮತ್ತಷ್ಟು ಕಗ್ಗಂಟಾಗುತ್ತಾ ಸಾಗಿದೆ.
Related Articles
Advertisement
ರೈಲ್ವೆ ಹಳಿಗಳ ಆಸುಪಾಸು ಕೊರೆಯುವ ಮೆಟ್ರೋ ಸುರಂಗ 30 ಮೀಟರ್ ಆಳದಲ್ಲಿರಬೇಕು ಎಂದು ರೈಲ್ವೆ ಮಂಡಳಿ ಮಾರ್ಗಸೂಚಿ ಹೊರಡಿಸಿದೆಯೇ ಎಂಬ ಪ್ರರ್ಶನೆಗೆ ಉತ್ತರಿಸಿದ ಸಕ್ಸೇನಾ, “ಎಷ್ಟು ಮೀಟರ್ ಆಳದಲ್ಲಿ ಸುರಂಗ ಕೊರೆಯಬೇಕು ಎಂಬುದು ಆಯಾ ಸ್ಥಳದ ಆಧಾರದಲ್ಲಿ ನಿರ್ಧಾರವಾಗುತ್ತದೆ. ಒಂದೊಮ್ಮೆ ನಮ್ಮ ಮೆಟ್ರೋದವರು ನೇರವಾಗಿ ರೈಲ್ವೆ ಮಂಡಳಿ ಜತೆ ಮಾತುಕತೆ ನಡೆಸಿದ್ದರೆ ಆ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ಸ್ಥಳಾಂತರ ಸಂಬಂಧ ಮೂರು ವಾರ ಹಿಂದಷ್ಟೇ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ಬಿಎಂಆರ್‌ಸಿಎಲ್ ಮತ್ತು ಡಿಆರ್‌ಎಂ ಜತೆ ಸಭೆ ನಡೆದಿದೆ. ಅಷ್ಟೇ ಅಲ್ಲ, ಸ್ಥಳ ಪರಿಶೀಲನೆ ಕೂಡ ಮಾಡಲಾಗಿದೆ.
2,500 ಮೀ. ಭೂಮಿ ಕೇಳಿದ್ದರು: “ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ತಾತ್ಕಾಲಿಕವಾಗಿ 16 ಸಾವಿರ ಮೀ. ಜಾಗ ಕೇಳಿದೆ. ಹಾಗೂ 2,500 ಮೀ. ಶಾಶ್ವತ ಭೂಮಿ ಬೇಕೆಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಇದು ಇನ್ನೂ ಚರ್ಚೆ ಹಂತದಲ್ಲಿದ್ದು, ಪೂರಕವಾಗಿ ಸ್ಪಂದಿಸಲಾಗುವುದು’ ಎಂದು ಸ್ವತಃ ನೈರುತ್ಯ ರೈಲ್ವೆ ಜುಲೈ 24ರಂದು ಸ್ಪಷ್ಟೀಕರಣ ನೀಡಿದೆ.
ಅಲ್ಲದೆ, ರೈಲ್ವೆ ಮತ್ತು ಬಿಎಂಆರ್‌ಸಿಎಲ್ ನಡುವೆ ನಡೆದ ಪತ್ರ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ಪ್ರಜಾ ಸಂಸ್ಥೆಯ ಸಂಜೀವ ದ್ಯಾಮಣ್ಣವರ ಮಾಹಿತಿ ಹಕ್ಕು ಅಡಿ ಕೇಳಿದ್ದರು. ಇದಕ್ಕೆ ರೈಲ್ವೆ ಇಲಾಖೆ, “ಈ ಪ್ರಕ್ರಿಯೆ ಇನ್ನೂ ಚರ್ಚೆ ಹಂತದಲ್ಲಿದೆ. ಹಾಗಾಗಿ, ತಕ್ಷಣಕ್ಕೆ ವಿವರವಾದ ಮಾಹಿತಿ ಒದಗಿಸುವುದು ಸಾಧ್ಯವಿಲ್ಲ’ ಎಂದು ಲಿಖೀತ ಪ್ರತಿಕ್ರಿಯೆ ನೀಡಿದೆ.
ದಿಕ್ಕುತಪ್ಪಿಸುವ ತಂತ್ರ- ಆರೋಪ: “ಇದು ಗೊಂದಲ ಸೃಷ್ಟಿಸುವ ತಂತ್ರವಷ್ಟೇ. ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣಕ್ಕೆ ಬಿಎಂಆರ್‌ಸಿಎಲ್ ಜಾಗ ಕೇಳಿದೆ ಎಂದು ಸ್ವತಃ ನೈರುತ್ಯ ರೈಲ್ವೆ ಸ್ಪಷ್ಟೀಕರಣ ನೀಡಿದೆ. ಮಾಹಿತಿ ಹಕ್ಕು ಅಡಿ ಕೇಳಿದ ಮಾಹಿತಿಯಲ್ಲೂ ಒಪ್ಪಿಕೊಂಡಿದೆ. ಹೀಗಿರುವಾಗ, ಡಿಆರ್‌ಎಂ ಈಗ ತಮಗೆ ಮೆಟ್ರೋ ನಿಗಮದಿಂದ ಪತ್ರವೇ ಬಂದಿಲ್ಲ ಎಂದಿರುವುದರಲ್ಲಿ ಅರ್ಥವಿಲ್ಲ. ಇದೆಲ್ಲ ಜನರ ದಿಕ್ಕು ತಪ್ಪಿಸುವ ತಂತ್ರ’ ಎಂದು ಸಂಜೀವ ದ್ಯಾಮಣ್ಣವರ ಆರೋಪಿಸಿದ್ದಾರೆ.
ಏನಿದು ಸುರಂಗ ಸ್ಥಳಾಂತರ ವಿವಾದ?: “ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗವಾರ ಮಧ್ಯೆ ಮೆಟ್ರೋ ಸುರಂಗ ಮಾರ್ಗ ನಿರ್ಮಿಸಲು ನಿರ್ಧರಿಸಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್), ಶಿವಾಜಿನಗರ-ಪಾಟರಿಟೌನ್ ನಡುವಿನ ಮಾರ್ಗದ ನಕ್ಷೆಯನ್ನು ಏಕಾಏಕಿ ಬದಲಿಸಿ, ಕಂಟೋನ್ಮೆಂಟ್ ಬದಲಿಗೆ ಬಂಬೂ ಬಜಾರ್ ಬಳಿಯ ಮೈದಾನದಡಿ ಸುರಂಗ ಮಾರ್ಗ ನಿರ್ಮಿಸಲು ತೀರ್ಮಾನಿಸಿದೆ.ಇದಕ್ಕೆ ತಾಂತ್ರಿಕ, ಸುರಕ್ಷತೆ ಹಾಗೂ ಆರ್ಥಿಕ ಕಾರಣಗಳನ್ನು ಬಿಎಂಆರ್‌ಸಿ ನೀಡಿದೆ.
ಆದರೆ, ಇದಕ್ಕೆ ಸ್ಥಳೀಯರು ಹಾಗೂ ರೈಲ್ವೆ ಹೋರಾಟಗಾರರ ವೇದಿಕೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮೂಲ ನಕ್ಷೆ ಪ್ರಕಾರವೇ ಮೆಟ್ರೋ ಹಾದುಹೋಗಬೇಕು ಎಂದು ಹೋರಾಟಗಾರರು ಪ್ರತಿಪಾದಿಸಿದ್ದಾರೆ. ಈ ಹೋರಾಟಕ್ಕೆ ಸಾಥ್ ನೀಡಿರುವ ಸಂಸದ ಪಿ.ಸಿ. ಮೋಹನ್, ಸ್ಥಳಾಂತರಕ್ಕೆ ನಿಗಮ ನೀಡುತ್ತಿರುವ ಕಾರಣಗಳು ಸಮರ್ಪಕ ಹಾಗೂ ಒಪ್ಪಿತವಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಮೂಲ ನಕ್ಷೆಯಂತೆಯೇ ಮೆಟ್ರೋ ನಿರ್ಮಾಣಕ್ಕೆ ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಚೆಗೆ ಪತ್ರ ಬರೆದಿದ್ದಾರೆ.
* ವಿಜಯಕುಮಾರ್ ಚಂದರಗಿ