Advertisement
ಪಟ್ಟಣದ ಬಾಪೂ ಸರ್ಕಲ್ ಬಳಿ ತೆರೆದಿರುವ ಇಂದಿರಾ ಕ್ಯಾಂಟೀನ್ ಅನ್ನು ಕಳೆದ ನಾಲ್ಕು ದಿನಗಳ ಹಿಂದೆ, ಅಂದರೆ ಮಾರ್ಚ್ 1 ರಂದು ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಆರ್.ಧ್ರುವನಾರಾಯಣ, ಶಾಸಕ ಅನಿಲ್ ಚಿಕ್ಕಮಾದು ಕ್ಯಾಂಟೀನ್ ಉದ್ಘಾಟಿಸಿದ್ದರು. ಆದರೆ, ಕ್ಯಾಂಟೀನ್ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾರಂಭದಲ್ಲೂ ಈ ರೀತಿ ನಿರ್ಲಕ್ಷ್ಯವಹಿಸಿದರೆ ಮುಂದೆ ಹೇಗೆ ಕಾರ್ಯನಿರ್ವಹಿಸಬಹುದು ಎಂಬ ಪ್ರಶ್ನೆ ಎದುರಾಗಿದೆ.
Related Articles
Advertisement
ತನಿಖೆ ನಡೆಸಿ: ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡರೂ ಕಾರ್ಯನಿರ್ವಹಿಸದಿರುವ ಕುರಿತು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯಕುಮಾರ್ ಅವರಿಗೆ ಸಾರ್ವಜನಿಕರು ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಗುತ್ತಿಗೆದಾರನ ಬಿಲ್ ಹಣ ತಡೆ ಹಿಡಿದು ಕಾಮಗಾರಿ ಗುಣಮಟ್ಟವನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆಗ್ರಹ: ಒಟ್ಟಾರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡರೂ ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಯಾವುದೇ ಮಾಹಿತಿಯೂ ಸಿಗುತ್ತಿಲ್ಲ. ಅಗ್ಗದ ದರಲ್ಲಿ ಊಟ, ಉಪಾಹಾರ ಸಿಗುವ ಕನಸು ಕಂಡಿದ್ದ ಪಟ್ಟಣದ ಜನತೆಗೆ ನಿರಾಶೆಯಾಗಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಹಾಗೂ ಶಾಸಕರು ಕ್ರಮ ಕೈಗೊಂಡು ತ್ವರಿತಗತಿಯಲ್ಲಿ ಸಮರ್ಪಕವಾಗಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಎಚ್.ಡಿ. ಕೋಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದ್ದು, ಅಡುಗೆ ತಯಾರಿಸಲು ಮೈಸೂರು ಮೂಲದವರು ಟೆಂಡರ್ ಪಡೆದಿದ್ದಾರೆ. ಆಡುಗೆ ತಯಾರಿಕೆಗೆ ಬೇಕಾದ ಎಲ್ಲಾ ಸಾಮಗ್ರಿಗಳು ಲಭ್ಯವಿದ್ದು, ಶೀಘ್ರದಲ್ಲೇ ಕ್ಯಾಂಟೀನ್ ಆರಂಭಿಸುತ್ತಾರೆ.-ಸುರೇಶ್, ಕಂದಾಯಾಧಿಕಾರಿ, ಪುರಸಭೆ ಬಡವರ, ಕೂಲಿ ಕಾರ್ಮಿಕರ ಹಸಿವು ನಿಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಪಟ್ಟಣದಲ್ಲಿ ಕ್ಯಾಂಟೀನ್ ಉದ್ಘಾಟಿಸಲು ತರಾತುರಿಯಲ್ಲಿ ಕಾಂಪೌಂಡ್ ನಿರ್ಮಿಸಲಾಗಿದೆ. ಇದು ಕಳಪೆ ಗುಣಮಟ್ಟದಿಂದ ಕೂಡಿದೆ. ಅಲ್ಲದೇ ಉದ್ಘಾಟನೆಯಾದ ನಾಲ್ಕೇ ದಿನದಲ್ಲಿ ಸ್ಥಗಿತಗೊಂಡಿದೆ.
-ರವಿಚಂದ್ರ, ಕಾಂಗ್ರೆಸ್ ಯುವ ಮುಖಂಡ * ಬಿ.ನಿಂಗಣ್ಣಕೋಟೆ