Advertisement
ಕ್ಯಾಂಟೀನ್‌ನಲ್ಲಿ ಕುಡಿಯಲು ನೀರಿಲ್ಲ ಎಂಬ ನೆಪದಲ್ಲಿ ಅಧಿಕಾರಿಯೊಬ್ಬರು ಸುಬ್ರಹ್ಮಣ್ಯ ನಗರದಲ್ಲಿನ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿದ್ದಾರೆ. ಅಧಿಕಾರಿಯ ಈ ವರ್ತನೆಯಿಂದ ಕೆಂಡವಾದ ಮೇಯರ್ ಜಿ.ಪದ್ಮಾವತಿ ಅವರು, ಕ್ಯಾಂಟೀನ್ ಮುಚ್ಚಿ ಬಡವರ ಹೊಟ್ಟೆ ಮೇಲೆ ಹೊಡೆದ ಬಿಬಿಎಂಪಿ ಹಿರಿಯ ಆರೋಗ್ಯ ಪರಿವೀಕ್ಷಕರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸುಬ್ರಮಣ್ಯನಗರದಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಬರುವ ಬಡವರಿಗೆ ಸಮರ್ಪಕವಾಗಿ ಆಹಾರ ಒದಗಿಸುತ್ತಿಲ್ಲ ಎಂಬ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಮೇಯರ್ ಪದ್ಮಾವತಿ ಅವರೇ ಸೋಮವಾರ ಬೆಳಗ್ಗೆ ಕ್ಯಾಂಟೀನ್ ಕಾರ್ಯನಿರ್ವಹಣೆ ಪರಿಶೀಲನೆಗೆ ಸುಬ್ರಹ್ಮಣ್ಯ ನಗರಕ್ಕೆ ತೆರಳಿದ್ದರು. ಆದರೆ ಪರಿಶೀಲನೆಗೆ ಹೋದ ಮೇಯರ್‌ರನ್ನು ಸ್ವಾಗತಿಸಿದ್ದು ಮುಚ್ಚಿದ ಗೇಟ್‌ಗಳು. ಇದೇ ವೇಳೆ ಗೇಟ್‌ನಿಂದ ಹೊರಗೆ ನಿಂತಿದ್ದ ಮೇಯರ್ ಕಣ್ಣಿಗೆ “ಕ್ಯಾಂಟೀನ್ ಮುಚ್ಚಿದೆ’ ಎಂಬ ನಾಮಫಲಕ ಕಂಡಿದೆ. ಫಲಕ ಕಂಡವರೇ ಕೋಪಗೊಂಡ ಜಿ.ಪದ್ಮಾವತಿ, “ಕ್ಯಾಂಟೀನ್ ಯಾಕೆ ಕ್ಲೋಸ್ ಮಾಡಿದ್ದೀರಿ?’ ಎಂದು ಅಲ್ಲೇ ಇದ್ದ ಹಿರಿಯ ಆರೋಗ್ಯ ಪರಿವೀಕ್ಷಕ ನಾಗೇಶ್‌ರನ್ನು ಪ್ರಶ್ನಿಸಿದಾಗ, “ಕುಡಿಯಲು ನೀರಿಲ್ಲದ ಕಾರಣ ಕ್ಯಾಂಟೀನ್ ಮುಚ್ಚಲಾಗಿದೆ’ ಎಂದು ಅಧಿಕಾರಿ ಉತ್ತರಿಸಿದ್ದಾರೆ.
Related Articles
Advertisement
ಇದೇ ವೇಳೆ ಪ್ರಕಾಶನಗರ, ಮಾದನಯಕನಹಳ್ಳಿ, ಅರಮನೆ ಮೈದಾನದ ಅಡುಗೆ ಮನೆಗಳಿಗೆ ಭೇಟಿ ನೀಡಿ ಸ್ವತ್ಛತೆ ಹಾಗೂ ಗುಣಮಟ್ಟ ಪರಿಶೀಲಿಸಿದ ಮೇಯರ್, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಡವರ ಹಸಿವು ನೀಗಿಸಲೆಂದೇ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿ ಜನರಿಗೆ ತೊಂದರೆ ನೀಡಬಾರದು. ನಿಗದಿಪಡಿಸಿರುವಷ್ಟು ಊಟ-ತಿಂಡಿಯನ್ನು ಸರಬರಾಜು ಮಾಡಲೇಬೇಕು. ಇಲ್ಲದಿದ್ದರೆ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು,’ ಎಂದು ಎಚ್ಚರಿಸಿದರು.
ನಿಮಗೆ ಜವಾಬ್ದಾರಿ ಇದೆಯಾ?ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನಂತರ ಮೇಯರ್ ಪದ್ಮಾವತಿ ಪರಿಶೀಲನೆಗಾಗಿ ಕ್ಯಾಂಟೀನ್ ಒಳ ಪ್ರವೇಶಿಸಿದರು. ಈ ವೇಳೆ ಅಡುಗೆ ಮನೆಯಿಂದ ಕ್ಯಾಂಟೀನ್‌ಗೆ ತಿಂಡಿ ಬಂದಿರುವುದು ಕಂಡುಬಂತು. ಇದರಿಂದ ಮತ್ತಷ್ಟು ಕೋಪಗೊಂಡ ಅವರು, “ಬಡವರಿಗೆ ಆಹಾರ ನೀಡುವ ಉದ್ದೇಶದಿಂದ ಯೋಜನೆ ಆರಂಭಿಸಲಾಗಿದೆ. ಕ್ಯಾಂಟೀನ್ ಹೊರಭಾಗದಲ್ಲಿ ಹಸಿದಿರುವ ನೂರಾರು ಜನ ಸಾಲಿನಲ್ಲಿ ನಿಂತಿದ್ದಾರೆ. ಕ್ಯಾಂಟೀನ್‌ಗೆ ತಿಂಡಿ ಕೂಡ ಬಂದಿದೆ. ಬಂದಿರುವ ತಿಂಡಿ ವಿತರಿಸುವ ಬದಲು ನೀರಿಲ್ಲ ಎಂದು ಬಾಗಿಲು ಹಾಕಿದ್ದೀರಲ್ಲಾ, ನಿಮಗೆ ಸ್ವಲ್ಪವಾದರೂ ಜವಾಬ್ದಾರಿ ಇದೆಯಾ?’ ಎಂದು ಗರಂ ಆದರು. ಪರಿವೀಕ್ಷಕ ಅಮಾನತು
ನೀರಿಲ್ಲ ಎಂದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಈಗ ನೂರು ರೂಪಾಯಿ ಕೊಟ್ಟರೆ ನಾಲ್ಕು ಕ್ಯಾನ್ ಕುಡಿಯುವ ನೀರು ಬರುತ್ತದೆ. ಆದರೆ ನೀವು ಕುಡಿಯಲು ನೀರಿಲ್ಲ ಎಂದು ಕ್ಯಾಂಟೀನನ್ನೇ ಮುಚ್ಚಿದ್ದೀರ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅಧಿಕಾರಿ ನಿರುತ್ತರರಾದಾಗ ಕೂಡಲೇ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ, ಆರೋಗ್ಯ ಪರಿವೀಕ್ಷಕ ನಾಗೇಶ್‌ರನ್ನು ಅಮಾನತುಗೊಳಿಸುವಂತೆ ಸೂಚಿಸಿದರು. ನಂತರ ಕೂಡಲೇ ಕ್ಯಾಂಟೀನ್ ಬಾಗಿಲು ತೆರೆದು ಜನರಿಗೆ ತಿಂಡಿ ವಿತರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಊಟದಲ್ಲಿ ಬಿಜೆಪಿ ಜಿರಲೇ ಹಾಕುವ ಭಯ!
ಬೆಂಗಳೂರು: ರಾಜ್ಯ ಬಿಜೆಪಿಯವರಿಗೆ ಇಂದಿರಾ ಕ್ಯಾಂಟೀನ್ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಕ್ಯಾಂಟೀನ್ ಅಡುಗೆಯಲ್ಲಿ ಜಿರಳೆ ಹಾಗೂ ಮತ್ತೇನಾದರೂ ಹಾಕುವ ಭಯ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬಿಜೆಪಿಯವರು ಏನಾದರೂ ಮಾಡಲು ಹಿಂಜರಿಯುವುದಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್ ಜನಪ್ರಿಯತೆ ದಾರಿ ತಪ್ಪಿಸಲು ಜಿರಳೆ ಅಥವಾ ಮತ್ತೇನಾದರೂ ಹಾಕುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದರು. ಬಡವರ ಹೊಟ್ಟೆ ಮೇಲೆ ಸಿರಿವಂತರ ಬರೆ
ಬೆಂಗಳೂರು: ಬಡವರಿಗಾಗಿ ತೆರೆದಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟಿ, ತಿಂಡಿಗಾಗಿ ಸಾಲಿನಲ್ಲಿ ನಿಲ್ಲುತ್ತಿರುವ ಜನರಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಸಿರಿವಂತರೇ ಹೆಚ್ಚಿರುವ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಹೊತ್ತಿನ ತುತ್ತಿಗೂ ಪರದಾಡುವ ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿದೆ. ಆದರೆ, ಸ್ಥಿತಿವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಟೀನ್‌ನ ಪ್ರಯೋಜನ ಪಡೆಯುತ್ತಿದ್ದಾರೆ. ಹೀಗಾಗಿ ಬಡವರ ಹೊಟ್ಟೆ ಮೇಲೆತಣ್ಣೀರು ಬಟ್ಟೆ ಬಿದ್ದಿದೆ. ಜಾಲತಾಣಗಳಲ್ಲಿ ಟೀಕೆ: ಕ್ಯಾಂಟೀನ್‌ಗಳಿಗೆ ಆರ್ಥಿಕವಾಗಿ ಸ್ಥಿತಿವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ಬಡವರಿಗೆ ಆಹಾರ ದೊರೆಯಂತಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ, ಟೀಕೆ ವ್ಯಕ್ತವಾಗಿವೆ. ಲಂಚ್ ಬಾಕ್ಸ್ ಫುಲ್!
ಮೊದಲ ಹಂತದಲ್ಲಿ ಪಲಿಕೆಯ 101 ವಾರ್ಡ್‌ಗಳಲ್ಲಿನ ಕ್ಯಾಂಟೀನ್‌ಗೆ ಚಾಲನೆ ನೀಡಿದ್ದರೂ ಪ್ರಸ್ತುತ ಆಹಾರ ಪೂರೈಕೆಯಾಗುತ್ತಿರುವುದು 70 ಕ್ಯಾಂಟೀನ್‌ಗಳಿಗೆ ಮಾತ್ರ. ನಗರದ ಕೇಂದ್ರ ಭಾಗದ ವಾರ್ಡ್‌ಗಳಲ್ಲಿರುವ ಕ್ಯಾಂಟೀನ್‌ಗಳ ಮುಂದೆ ಸಾಲಲ್ಲಿ ನಿಲ್ಲುತ್ತಿರುವುದು ಬೆಳಗ್ಗೆ ವಾಯು ವಿಹಾರಕ್ಕೆ ಬರುವವರು, ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುವವರು. ಶಾಲೆ ಮಕ್ಕಳ ಜತೆ ಬರುವ ಪೋಷಕರು, ಎರಡು ಟೋಕನ್ ಪಡೆದು ಒಂದು ಪ್ಲೇಟ್ ತಿಂಡಿಯನ್ನು ಮಕ್ಕಳಿಗೆ ತಿನ್ನಿಸಿ, ಮತ್ತೂಂದು ಪ್ಲೇಟ್ ತಿಂಡಿಯನ್ನು ಮಕ್ಕಳ ಲಂಚ್ ಬಾಕ್ಸ್‌ಗೆ ತುಂಬಿ ಕಳುಹಿಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಇರುವುದು ಬಡವರಿಗಾಗಿ. ಆರ್ಥಿಕವಾಗಿ ಸಿರಿವಂತರಾಗಿರುವ ಜನ ಅಲ್ಲಿ ಊಟ ಮಾಡುವ ಮೊದಲು ಒಮ್ಮೆ ಹಸಿದವರ ಬಗ್ಗೆ ಯೋಚಿಸಬೇಕು. ಉಳ್ಳವರೇ ಇಂದಿರಾ ಕ್ಯಾಂಟೀನ್‌ಗೆ ಬಂದರೆ ಬಡವರು ಎಲ್ಲಿಗೆ ಹೋಗಬೇಕು?
-ಪದ್ಮಾವತಿ, ಮೇಯರ್