Advertisement

ಕೋಟಿ ಜನರಿಗೆ ಕ್ಯಾಂಟೀನ್‌ ಸವಿ

01:27 PM Nov 07, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಿ ಎರಡೂವರೆ ತಿಂಗಳು ಕಳೆದಿದ್ದು, ಒಂದು ಕೋಟಿ ಜನರಿಗೆ ಆಹಾರ ಪೂರೈಕೆ ಮಾಡಿದ ಹೆಗ್ಗಳಿಕೆಗೆ ಇಂದಿರಾ ಕ್ಯಾಂಟೀನ್‌ ಪಾತ್ರವಾಗಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 150 ವಾರ್ಡ್‌ಗಳಲ್ಲಿನ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ನಗರದ ಎಲ್ಲ ಭಾಗಗಳಲ್ಲಿ ಕ್ಯಾಂಟೀನ್‌ಗಳಿಗೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಕೇವಲ 83 ದಿನಗಳಲ್ಲಿ ಒಂದು ಕೋಟಿ ಜನರು ಕ್ಯಾಂಟೀನ್‌ಗಳಲ್ಲಿ ತಿಂಡಿ-ಊಟ ಸವಿದಿದ್ದಾರೆ.

ನಗರದಲ್ಲಿನ ಬಡವರಿಗೆ ರಿಯಾಯಿತಿ ದರದಲ್ಲಿ ತಿಂಡಿ-ಊಟ ನೀಡುವ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿತ್ತು. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆಗಸ್ಟ್‌ 16ರಂದು ಜಯನಗರದ ಕನಕನಪಾಳ್ಯದ ಕ್ಯಾಂಟೀನ್‌ ಉದ್ಘಾಟಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದರು. ಅದರಂತೆ ನವೆಂಬರ್‌ 6ರ ವೇಳೆಗೆ ಸುಮಾರು 150 ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಿದ್ದು, ಕೋಟಿ ಜನರಿಗೆ ಆಹಾರ ಪೂರೈಕೆ ಮಾಡಿವೆ. 

ಮುಖ್ಯಮಂತ್ರಿಗಳು ಎರಡು ಬಾರಿ ಗಡುವು ನೀಡಿದರೂ 198 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ನಿರ್ಮಿಸುವಲ್ಲಿ ಪಾಲಿಕೆಯ ಅಧಿಕಾರಿಗಳು ವಿಫ‌ಲವಾಗಿದ್ದು, ಇನ್ನೂ 18 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ಥಳ ನಿಗದಿಗೊಳಿಸಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೂ ಸ್ಥಳೀಯ ಸಚಿವರು ಹಾಗೂ ಶಾಸಕರ ದಿನಾಂಕ ಲಭ್ಯವಾಗದ ಹಿನ್ನೆಲೆಯಲ್ಲಿ ಉದ್ಘಾಟನೆಗೊಂಡಿಲ್ಲ.

ಬಿಬಿಎಂಪಿ ವತಿಯಿಂದ ನಿತ್ಯ ಪ್ರತಿ ಕ್ಯಾಂಟೀನ್‌ನಲ್ಲಿ 1150 ಜನರಿಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಪೂರೈಕೆ ಮಾಡಲಾಗುತ್ತಿದೆ. ಈ ಮೊದಲು ಪ್ರತಿ ಕ್ಯಾಂಟೀನ್‌ನಲ್ಲಿ 1500 ಜನರಿಗೆ ಆಹಾರ ಪೂರೈಕೆ ಮಾಡುವುದಾಗಿ ತಿಳಿಸಲಾಗಿತ್ತಾದರೂ, ಕೆಲವೊಂದು ಕ್ಯಾಂಟೀನ್‌ಗಳಲ್ಲಿ ಕಡಿಮೆ ಜನರು ತಿಂಡಿ-ಊಟಕ್ಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಆಹಾರ ಪೂರೈಕೆ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. 

Advertisement

ಈವರೆಗೆ 150 ಕಡೆಗಳಲ್ಲಿನ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆ ಮಾಡಲಾಗುತ್ತಿದ್ದು, 18 ಕಡೆಗಳಲ್ಲಿ ಕ್ಯಾಂಟೀನ್‌ ನಿರ್ಮಾಕ್ಕಾಗಿ ಜಾಗವನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಬೇಕಾಗಿದೆ. ಉಳಿದಂತೆ 12 ಕಡೆಗಳಲ್ಲಿ ನಿರ್ಮಾಣ ಪೂರ್ಣಗೊಂಡಿರುವ ಕ್ಯಾಂಟೀನ್‌ಗಳು ಉದ್ಘಾಟನೆಗೊಳ್ಳಬೇಕಿದ್ದು, 18 ಕಡೆಗಳಲ್ಲಿ ಈವರೆಗೆ ಜಾಗ ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನಗರದ 150 ವಾರ್ಡ್‌ಗಳ ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಣೆ ಮಾಡುತ್ತಿದ್ದು, ಈವರೆಗೆ ಆಹಾರ ಸೇವಿಸಿದವರ ಸಂಖ್ಯೆ ಒಂದು ಕೋಟಿ ಮೀರಿದೆ. ಇನ್ನು ಹಲವಾರು ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ಉದ್ಘಾಟನೆಗೆ ಸಿದ್ಧಗೊಂಡಿದ್ದು, ಜಾಗ ದೊರೆಯದ 18 ವಾರ್ಡ್‌ಗಳಲ್ಲಿ ಮೊಬೈಲ್‌ ಕ್ಯಾಂಟೀನ್‌ ಸೇವೆ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next