ಒಳ-ಹೊರ ರೋಗಿಗಳು ಹಾಗೂ ಅವರ ಸಂಬಂಧಿಕರು ಊಟ-ಉಪಹಾರಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸ್ಪತ್ರೆ ಅವರಣದಲ್ಲಿಯೇ ಕ್ಯಾಂಟೀನ್ ತೆರೆಯಲು ಮುಂದಾಗಿದೆ. ಈಗಾಗಲೇ ಕ್ಯಾಂಟೀನ್ ಕಟ್ಟಡ ಪೂರ್ಣ ಹಂತಕ್ಕೆ ಬಂದು ತಲುಪಿದ್ದು, ತಿಂಗಳೊಳಗೆ ಆರಂಭಗೊಳ್ಳುವ ಸಾಧ್ಯತೆ ಇದೆ. 500 ಚದರಡಿಯಲ್ಲಿ ನಾಗರಿಕ ಸೌಲಭ್ಯ ಕ್ಯಾಂಟೀನ್ ಕಟ್ಟಡ ನಿರ್ಮಾಣ ನಿರ್ಮಾಣಕ್ಕೆ ಉಚಿತವಾಗಿ ಸ್ಥಳಾವಕಾಶ, ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಆಸ್ಪತ್ರೆ ಆಡಳಿತವೇ ಮಾಡಬೇಕಿದೆ. ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ ಅಧಿಕಾರಿಗಳು ಕ್ಯಾಂಟೀನ್ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಈಗಾಗಲೇ ಸಿದ್ಧ ಮಾದರಿ ಉಪಕರಣ ತಂದು ಜೋಡಣೆ ಮಾಡುವ ಕಾರ್ಯ ನಡೆದಿದೆ. ಅದು ಮುಕ್ತಾಯವಾಗುತ್ತಿದ್ದಂತೆ ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಒಂದು ತಿಂಗಳಲ್ಲಿ ಕ್ಯಾಂಟೀನ್ ಕಾರ್ಯಾರಂಭವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹೊಸ ಕ್ಯಾಂಟೀನ್‌ನಲ್ಲಿ ಊಟ, ಉಪಹಾರ ಮಾತ್ರವಲ್ಲದೇ ಕುಡಿಯಲು ಶುದ್ಧ ನೀರಿನ ಘಟಕ, ಶೌಚಾಲಯ ಆರಂಭಿಸಲಾಗುತ್ತಿದೆ. ಈಗಾಗಲೇ ಕಳೆದ 6 ತಿಂಗಳ ಹಿಂದೆ ನಂದಿನಿ ಮಿಲ್ಕ್ ಪಾರ್ಲರ್ ಕೂಡ ಪ್ರಾರಂಭವಾಗಿದೆ. ಒಂದೇ ಸೂರಿನಡಿ ಪೌಷ್ಟಿಕ ಆಹಾರ, ಹಾಲು, ಶುದ್ಧ ಕುಡಿಯುವ ನೀರನ್ನು ರಿಯಾಯತಿದರದಲ್ಲಿ ಕಲ್ಪಿಸುವುದು ಸರ್ಕಾರದ ಬಹು ದೊಡ್ಡ ಉದ್ದೇಶವಾಗಿದೆ. ಆಸ್ಪತ್ರೆ ಕ್ಯಾಂಟೀನ್‌ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದಲೇ ಅಕ್ಕಿ, ಗೋದಿ, ದಿನಸಿ ಸೇರಿದಂತೆ ಧಾನ್ಯಗಳನ್ನು ರಿಯಾಯತಿ ದರದಲ್ಲಿ ಪೂರೈಸಲಾಗುತ್ತದೆ. ಹಾಗಾಗಿ ಕಡಿಮೆ ದರದಲ್ಲಿ ಊಟ-ಉಪಹಾರ ಒದಗಿಸಲು ಅನುಕೂಲವಾಗಲಿದೆ. ಪ್ರತಿ ನಿತ್ಯ 300 ಜನರಿಗೆ ಊಟೋಪಚಾರದ ವ್ಯವಸ್ಥೆ ಇರಲಿದೆ. ಕ್ಯಾಂಟೀನ್ ನಿರ್ವಹಣೆಗೆ ಒಂದು ವರ್ಷದ ಅವಧಿಗೆ ಹೊರ ಗುತ್ತಿಗೆ ನೀಡಲಾಗುತ್ತಿದೆ. ಟೆಂಡರ್ ನೀಡುವಾಗ ಅಂಗವಿಕಲ, ವಿಧವೆ ಅಥವಾ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡಲಾಗುತ್ತಿದೆ. ಅತಿ ಕಡಿಮೆ ದರ ನಮೂದು ಮಾಡುವ ಸಂಸ್ಥೆಯೊಂದಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಉತ್ತಮ ನಿರ್ವಹಣೆ ತೋರಿದರೆ ಮತ್ತೆ ಒಂದು ವರ್ಷ ಒಪ್ಪಂದ ಮುಂದುವರಿಸಲಾಗುವುದು. ಅಲ್ಲಿ ಬಳಸುವ ಒಲೆ, ಪಾತ್ರೆ, ಪ್ರಿಡ್ಜ್, ಕುರ್ಚಿ, ಮೇಜುಗಳನ್ನು ಎಂಎಸ್‌ಐಎಲ್‌ನಿಂದ ಪೂರೈಕೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಹಿಂದುಳಿದ ಜೇವರ್ಗಿ ತಾಲೂಕಿನ ಬಡ ರೋಗಿಗಳಿಗಾಗಿ ರಿಯಾಯತಿ ದರದಲ್ಲಿ ಕ್ಯಾಂಟೀನ್ ತೆರೆಯುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ.
Advertisement
ವಿಜಯಕುಮಾರ ಎಸ್. ಕಲಾ