ಮೆಲ್ಬರ್ನ್: ಅಡಿಲೇಡ್‌ನ ಮಾಲ್‌ವೊಂದರಲ್ಲಿ ಆಸ್ಟ್ರೇಲಿಯನ್ ಅಂಚೆ ಕಚೇರಿಯ ಹೊರಗೆ ಅಳವಡಿಸಲಾಗಿದ್ದ ಫಲಕವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಭಾರತೀಯರನ್ನು ಹೀಯಾಳಿಸುವಂಥ “ಜನಾಂಗೀಯ ದ್ವೇಷ’ವನ್ನು ಪ್ರತಿಬಿಂಬಿಸುವ ಫಲಕದ ವಿರುದ್ಧ ಭಾರತೀಯ ಸಮುದಾಯವು ಕೆಂಡಕಾರಿದೆ. ವಿವಾದವು ತೀವ್ರಗೊಂಡ ಹಿನ್ನೆಲೆಯಲ್ಲಿ ಆಸ್ಟ್ರೇಲಿಯನ್ ಪೋಸ್ಟ್ ಆಫೀಸ್ ಕ್ಷಮೆಯಾಚಿಸಿದ್ದು, ಆ ಫಲಕವನ್ನು ತೆಗೆದುಹಾಕುವುದಾಗಿ ತಿಳಿಸಿದೆ.
ಬೆಳಕು ಕಡಿಮೆಯಿರುವ ಕಾರಣ ಪಾಸ್‌ಪೋರ್ಟ್ ಗಾತ್ರದ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗ್ರಾಹಕರಿಗೆ ತಿಳಿಸುವ ಭರದಲ್ಲಿ ಆಸ್ಟ್ರೇಲಿಯನ್ ಪೋಸ್ಟ್ ಆಫೀಸ್ ಜನಾಂಗೀಯ ಭೇದ ತೋರಿಸುವಂಥ ಸೂಚನಾ ಫಲಕವನ್ನು ಅಳವಡಿಸಿದೆ.
“ಲೈಟಿಂಗ್ ಮತ್ತು ಫೋಟೋ ಬ್ಯಾಕ್‌ಗ್ರೌಂಡ್‌ನ ಗುಣಮಟ್ಟದ ಸಮಸ್ಯೆಯಿಂದಾಗಿ, ನಮಗೆ ಭಾರತೀಯ ಫೋಟೋಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಅಡಚಣೆಗಾಗಿ ವಿಷಾದಿಸುತ್ತೇವೆ’ ಎಂದು ಸೂಚನಾ ಫಲಕದಲ್ಲಿ ಬರೆಯಲಾಗಿದೆ. ಇದನ್ನು ಅನೇಕರು ಖಂಡಿಸಿದ್ದು, “ಜನರ ಬಣ್ಣ ಅಥವಾ ಅವರ ಮೂಲವನ್ನು ಉಲ್ಲೇಖೀಸಿ ಯಾರೂ ಯಾರಿಗೂ ತಾರತಮ್ಯ ಮಾಡಬಾರದು. ಇದು ಸರಿಯಲ್ಲ’ ಎಂದಿದ್ದಾರೆ.