ತಿರುವನಂತಪುರಂ: ಕಾಂಗ್ರೆಸ್ ಪಕ್ಷದೊಳಗಿನ ಗುಂಪುಗಾರಿಕೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಿಸಿ ಚಾಕೋ ಬುಧವಾರ(ಮಾರ್ಚ್ 10) ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ಸಾಮೂಹಿಕ ಅತ್ಯಾಚಾರ ಪ್ರಕರಣ ದೂರು ದಾಖಲಿಸಿದ ಬಾಲಕಿ ತಂದೆ ರಸ್ತೆ ಅಪಘಾತದಲ್ಲಿ ಸಾವು
ರಾಜೀನಾಮೆ ಪತ್ರವನ್ನು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ್ದು, ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ಚಾಕೋ ಅವರ ರಾಜೀನಾಮೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ತಂದೊಡ್ಡಿದೆ ಎಂದು ವರದಿ ತಿಳಿಸಿದೆ.
ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನನ್ನ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಪಿಸಿ ಚಾಕೋ(74) ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ತ್ರಿಶ್ಶೂರ್ ನ ಮಾಜಿ ಸಂಸದರಾಗಿದ್ದಾರೆ.
ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವೇಳೆ ಕಾಂಗ್ರೆಸ್ ಪಕ್ಷ ರಾಜ್ಯದ ಮುಖಂಡರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಚಾಕೋ, ಕಾಂಗ್ರೆಸ್ ನಲ್ಲಿ ಯಾವುದೇ ಪ್ರಜಾಪ್ರಭುತ್ವ ಉಳಿದಿಲ್ಲ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ರಾಜ್ಯ ಕಾಂಗ್ರೆಸ್ ಸಮಿತಿಯಲ್ಲಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ದೂರಿದ್ದಾರೆ.
ನಾನು ಪಕ್ಷಕ್ಕಾಗಿ ಶ್ರಮವಹಿಸಿ ದುಡಿದಿದ್ದೇನೆ, ಆದರೆ ಈಗ ನಿಜಕ್ಕೂ ಕೇರಳ ಕಾಂಗ್ರೆಸ್ ಮುಖಂಡರೊಂದಿಗೆ ಕೆಲಸ ಮಾಡುವುದು ತುಂಬಾ ಕಷ್ಟವಾಗಿದೆ. ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವ ನಿರ್ಧಾರದ ಪರವಾಗಿದ್ದೇನೆ, ಆದರೆ ಈಗ ತುಂಬಾ ಕಷ್ಟವಾಗುತ್ತಿದೆ. ನೀವು ಒಬ್ಬ ವ್ಯಕ್ತಿಯಿಂದಲೇ ಪಕ್ಷವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಚಾಕೋ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಕೇರಳ ಕಾಂಗ್ರೆಸ್ ಮುಖಂಡರಾದ ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಾಲಾ ವಿರುದ್ಧ ವಾಗ್ದಾಳಿ ನಡೆಸಿರುವ ಚಾಕೋ, ಪಕ್ಷದೊಳಗಿನ ತಮ್ಮ ಗುಂಪುಗಾರಿಕೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ ಈ ಬಗ್ಗೆ ಮೂಕ ಪ್ರೇಕ್ಷಕವಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.