Advertisement

ಪ್ರೇಕ್ಷಕರ ಮೇಲೆ ಗೂಬೆ ಕೂರಿಸುವಂತಿಲ್ಲ …

11:17 AM Aug 26, 2019 | Lakshmi GovindaRaj |

ಅವನ ಹೆಸರು ರಾಬರ್ಟ್‌. ಪಕ್ಷಿಗಳ ಮೇಲೆ ಡಾಕ್ಯುಮೆಂಟರಿ ಮಾಡುವ ಕಂಪೆನಿಯಲ್ಲಿ ಕೆಲಸ ಮಾಡುವ ಈ ಹುಡುಗನಿಗೆ ತುಂಬಾ ಅಪರೂಪವೆನಿಸುವ ವಿಶಿಷ್ಟ ಪ್ರಭೇದದ ಗೂಬೆಯ ಮೇಲೆ ಡಾಕ್ಯುಮೆಂಟರಿ ಮಾಡುವ ಆಸೆ. ಇದರ ನಡುವೆ ಆಗಾಗ್ಗೆ ನಡುರಾತ್ರಿಯಲ್ಲಿ ಬೀಳುವ ವಿಚಿತ್ರ ಕನಸು ಇವನ ನಿದ್ದೆ ಕೆಡಿಸುತ್ತಿರುತ್ತದೆ. ಹೀಗಿರುವಾಗಲೇ ರಾಬರ್ಟ್‌, ಒಮ್ಮೆ ಆ ವಿಶಿಷ್ಟ ಗೂಬೆಯನ್ನು ಹುಡುಕಿಕೊಂಡು ಒಡೆಯನ ಸಮುದ್ರ ಎಂಬ ಜಾಗಕ್ಕೆ ಹೋಗುತ್ತಾನೆ.

Advertisement

ಅಲ್ಲಿಗೆ ಬಂದ ಮೇಲೆ ತಾನು ಉಳಿದುಕೊಂಡಿರುವ ಮನೆಯ ಮಾಲೀಕನ ಮಗಳ ಕಣ್ಣೋಟಕ್ಕೆ ಕಾಲು ಜಾರುವ ನಾಯಕ ಗೂಬೆಯನ್ನು ಬಿಟ್ಟು ಗಿಳಿ(ನಾಯಕಿ)ಯ ಹಿಂದೆ ಬೀಳುತ್ತಾನೆ. ನಡುರಾತ್ರಿ ಬಿಚ್ಚಿ ಬೀಳಿಸುತ್ತಿದ್ದ ಕನಸುಗಳಿಗೆ ಅಲ್ಲಿ ವಾಸ್ತವದ ಲಿಂಕುಗಳು ಬೆಸೆಯುತ್ತಾ ಹೋಗುತ್ತವೆ. ಇದರ ನಡುವೆ ಶ್ರೀಲಂಕಾ ರಾಜನ ಗೂಬೆ ಕಥೆ, ಬಳಿಕ “ರಾಂಧವ’ ಎಂಬ ಮತ್ತೂಬ್ಬ ರಾಜನ ಕಥೆ ತೆರೆದುಕೊಳ್ಳುತ್ತದೆ.

ಹಾರರ್‌-ಥ್ರಿಲ್ಲರ್‌ ಚಿತ್ರವೆಂದ ಮೇಲೆ ಅಲ್ಲೊಂದಷ್ಟು ಟ್ವಿಸ್ಟ್‌, ಟರ್ನ್ಸ್, ರೋಚಕತೆ ಇರಲೇಬೇಕಲ್ಲ! ಹಾಗಾಗಿ ಗ್ಯಾಪಲ್ಲಿ ಒಂದಷ್ಟು ಭೂತಾರಾಧನೆ ಎಪಿಸೋಡ್‌, ಆ್ಯಕ್ಷನ್ಸ್‌ ದೃಶ್ಯಗಳು, ಮರ್ಡರಿ ಮಿಸ್ಟರಿ. ಇವುಗಳ ಜೊತೆಗೆ ಒಂದೆರಡು ಹಾಡು, ಲವ್‌, ಸೆಂಟಿಮೆಂಟ್‌, ಎಮೋಶನ್ಸ್‌… ಹೀಗೆ ತಿರುವುಗಳ ಮೇಲೆ ತಿರುವುಗಳನ್ನು ಕೊಡುತ್ತಾ “ಕಾಗಕ್ಕ-ಗೂಬಕ್ಕ’ನ ಕಥೆ ಹೇಳುತ್ತಾ “ರಾಂಧವ’ ಕ್ಲೈಮ್ಯಾಕ್ಸ್‌ಗೆ ಬರುವ ಹೊತ್ತಿಗೆ ಪ್ರೇಕ್ಷಕರ ತಾಳ್ಮೆಯೂ ಕ್ಲೈಮ್ಯಾಕ್ಸ್‌ ಹಂತ ತಲುಪಿರುತ್ತದೆ.

ಇದು ಈ ವಾರ ತೆರೆಗೆ ಬಂದಿರುವ “ರಾಂಧವ’ನ ಕಥೆ. ಕನ್ನಡವೂ ಸೇರಿದಂತೆ ಈಗಾಗಲೇ ಹಲವು ಭಾಷೆಗಳಲ್ಲಿ ಬಂದ ಹತ್ತಾರು ಚಿತ್ರಗಳ ಕಥೆಯ ಎಳೆ ಇಟ್ಟುಕೊಂಡು ಅದನ್ನು ರೋಚಕತೆ ಹುಟ್ಟಿಸುವ ಭರದಲ್ಲಿ ನಿರ್ದೇಶಕರೇ ಎಡವಿರುವುದು ಗೊತ್ತಾಗುತ್ತದೆ. ಗೂಬೆ, ಕನಸು, ರಾಜ, ಮರ್ಡರ್‌, ಸೇಡು ಹೀಗೆ… ಒಂದಕ್ಕೊಂದು ಲಿಂಕ್‌ ಇಲ್ಲದ ದೃಶ್ಯಗಳಿಂದಾಗಿ ಚಿತ್ರ ಅಷ್ಟಾಗಿ ನೋಡುಗರ ಗಮನ ಸೆಳೆಯುವುದಿಲ್ಲ.

ತಮ್ಮ ಹಾರರ್‌-ಥ್ರಿಲ್ಲರ್‌ ಚಿತ್ರದಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಲು ಇನ್ನಿಲ್ಲದ ಸಾಹಸ ಮಾಡಿರುವ ನಿರ್ದೇಶಕ ಸುನೀಲ್‌ ಆಚಾರ್ಯ, ಅದನ್ನು ದಡ ಸೇರಿಸಲು ಕಷ್ಟಪಟ್ಟಿದ್ದಾರೆ. ಇನ್ನು ನಾಯಕ ನಟ ಭುವನ್‌ ಪೊನ್ನಣ್ಣ ಮೂರು ಗೆಟಪ್‌ನಲ್ಲಿ ಕಾಣಿಸಿಕೊಂಡರೂ, ಯಾವ ಗೆಟಪ್‌ ಅನ್ನು ಕೂಡ ಸಮರ್ಥವಾಗಿ ನಿಭಾಯಿಸಿಲ್ಲ. ಭುವನ್‌ ಅಭಿನಯದಲ್ಲಿ ಇನ್ನೂ ಸಾಕಷ್ಟು ಪಳಗಬೇಕಿದೆ.

Advertisement

ಚಿತ್ರದ ಇಬ್ಬರು ನಾಯಕಿಯರು ನಿರ್ದೇಶಕರು ಹೇಳಿಕೊಟ್ಟಿರುವುದನ್ನು ಅಚ್ಚುಕಟ್ಟಾಗಿ ಒಪ್ಪಿಸಿದ್ದಾರೆ. ಕಾಮಿಡಿ ಪಾತ್ರದಲ್ಲಿ ನಟ ಜಹಾಂಗೀರ್‌ ಅಭಿನಯ ಬಹುತೇಕ ಕಡೆಗಳಲ್ಲಿ ಕಿರಿಕಿರಿ ಎನಿಸುತ್ತದೆ. ಉಳಿದ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ. ಇನ್ನು ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡಿಬಂದಿದೆ. ಸುಂದರ ಲೊಕೇಶ್‌ಗಳು ಚಿತ್ರದಲ್ಲಿದ್ದರೂ, ಸಂಕಲನ ಕಾರ್ಯದಲ್ಲಿ ಹರಿತವಿಲ್ಲ.

ಚಿತ್ರ: ರಾಂಧವ
ನಿರ್ಮಾಣ: ಎಸ್‌.ಆರ್‌ ಸನತ್‌ ಕುಮಾರ್‌
ನಿರ್ದೇಶನ: ಸುನೀಲ್‌ ಆಚಾರ್ಯ
ತಾರಾಗಣ: ಭುವನ್‌ ಪೊನ್ನಣ್ಣ, ಅಪೂರ್ವ ಶ್ರೀನಿವಾಸ್‌, ಜಹಾಂಗೀರ್‌, ಯಮುನಾ ಶ್ರೀನಿಧಿ, ಅರವಿಂದ ರಾವ್‌, ಮಂಜುನಾಥ್‌ ಹೆಗ್ಡೆ, ಲಕ್ಷ್ಮೀ ಹೆಗ್ಡೆ, ವಾಣಿಶ್ರೀ, ಸುನೀಲ್‌ ಪುರಾಣಿಕ್‌, ರೇಣು ಕುಮಾರ್‌ ಮತ್ತಿತರರು.

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next