ಉತ್ತರ ಕರ್ನಾಟಕ ಭೀಕರ ಪ್ರವಾಹದ ಸುಳಿಗೆ ಅಲ್ಲಿನ ಬಹುತೇಕ ಎಲ್ಲಾ ಜನ ಸಾಮಾನ್ಯರ ಬದುಕು ಹೈರಾಣಾಗಿದೆ. ಪ್ರವಾಹದ ಹೊಡೆತಕ್ಕೆ ಬಡವ-ಬಲ್ಲಿದ, ಜನ ನಾಯಕರು, ಸ್ಟಾರ್‌ಗಳು, ಜನಸಾಮಾನ್ಯರು ಎಂಬ ಯಾವ ಬೇಧ-ಭಾವವೂ ಇಲ್ಲದೆ ಎಲ್ಲರೂ ನಲುಗಿ ಹೋಗಿದ್ದಾರೆ. ಇದಕ್ಕೆ ದಕ್ಷಿಣ ಭಾರತದ ಸ್ಟಾರ್ ನಟಿಯರ ಪೈಕಿ ಒಬ್ಬರಾಗಿರುವ ಲಕ್ಷ್ಮೀ ರೈ ಆಡಿರುವ ಮಾತುಗಳು ಕೈಗನ್ನಡಿ ಹಿಡಿದಿರುವಂತಿದೆ. ಬೆಳಗಾವಿ ಮೂಲದವರಾದ ಲಕ್ಷ್ಮೀ ರೈ ಮೊದಲು ಕನ್ನಡ ಚಿತ್ರರಂಗಕ್ಕೆ ನಂತರ ಇಲ್ಲಿಂದ ತಮಿಳು, ತೆಲುಗು ಚಿತ್ರರಂಗದತ್ತ ಮುಖ ಮಾಡಿದ ನಟಿ.
ಸದ್ಯ ಲಕ್ಷ್ಮೀ ರೈ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಜನಪ್ರಿಯ ಸ್ಟಾರ್ ನಟಿಯರಲ್ಲಿ ಒಬ್ಬರು. ಈಗಲೂ ಲಕ್ಷ್ಮೀ ರೈ ಅವರ ಪೋಷಕರು ಇರುವುದು ಬೆಳಗಾವಿಯಲ್ಲಿ. ಹಾಗಾಗಿ ಆಗಾಗ್ಗೆ ಬೆಳಗಾವಿಗೆ ಹೋಗಿಬರುವ ಲಕ್ಷ್ಮೀ ರೈ ಅವರಿಗೆ ಈ ಬಾರಿ ಪ್ರವಾಹ ಅಲ್ಲಿಗೆ ಹೋಗದಂತ ಪರಿಸ್ಥಿತಿಯನ್ನು ಉಂಟು ಮಾಡಿದೆ. ಈ ಬಗ್ಗೆ ಮಾತನಾಡಿದ ಲಕ್ಷ್ಮೀ ರೈ, “ಉತ್ತರ ಕರ್ನಾಟಕದ ಜನರ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ನನ್ನ ಪೋಷಕರು ಕೂಡ ಬೆಳಗಾವಿಯಲ್ಲೇ ವಾಸವಿದ್ದಾರೆ. ನನಗೂ ಕೂಡ ಈಗ ಅಲ್ಲಿಗೆ ಹೋಗಲು ಆಗದಂತಹ ಸ್ಥಿತಿ ಇದೆ.
ನಾನು ಕೂಡ ಊರಿಗೆ ಹೋಗಬೇಕು ಎಂದು ಪ್ರಯತ್ನ ಪಟ್ಟೆ. ಆದ್ರೆ. ಪೋಷಕರು ಈಗ ಬರೋದು ಬೇಡ ಅಂತ ಹೇಳಿದ್ರು. ಅಲ್ಲಿಗೆ ಹೋಗಬೇಕು ಅಂದ್ರು ಈಗ ರಸ್ತೆ ಕೂಡ ಇಲ್ಲ. ಹಾಗಾಗಿ ಹೋಗಿಲ್ಲ. ಇದೊಂದು ಪ್ರಕೃತಿ ವಿಕೋಪ. ಹಾಗಾಗಿ ಇಲ್ಲಿ ಯಾರನ್ನೂ ದೂರಲಾಗುವುದಿಲ್ಲ. ಇದಕ್ಕೆ ಯಾರೂ ಜವಾಬ್ದಾರರಲ್ಲ. ಈಗ ಪ್ರವಾಹ ಸಂತ್ರಸ್ತರಿಗೆ ಬೇಕಾಗಿರುವುದು ಎಲ್ಲರ ನೆರವು ಮತ್ತು ಬೆಂಬಲ. ನಾನು ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ.
ಸಾಧ್ಯವಾದಷ್ಟು ಎಲ್ಲರು ಮುಂದೆ ಬಂದು ಉತ್ತರ ಕರ್ನಾಟಕ ಜನರಿಗೆ ನೆರವಾಗಬೇಕು’ ಎಂದು ಕೇಳಿಕೊಂಡಿದ್ದಾರೆ. ಅಂದಹಾಗೆ, ಇತ್ತೀಚೆಗೆ “ಝಾನ್ಸಿ’ ಚಿತ್ರದ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ಲಕ್ಷ್ಮೀ ರೈ ಕರ್ನಾಟಕದಲ್ಲಿ ಪ್ರವಾಹ ಸಂತ್ರಸ್ತರ ಬಗ್ಗೆ ಮಾತಿಗಿಳಿದಾಗ ತಮ್ಮ ಪರಿಸ್ಥಿತಿಯನ್ನೂ ತೆರೆದಿಟ್ಟರು. ಒಟ್ಟಾರೆ ಲಕ್ಷ್ಮೀ ರೈ ಅವರ ಮಾತುಗಳು ಪ್ರವಾಹ ಎನ್ನುವುದು ಯಾರನ್ನೂ ಬಿಡುವುದಿಲ್ಲ. ಪ್ರಕೃತಿಯ ಮುಂದೆ ಎಲ್ಲರೂ ಮಂಡಿಯೂರಲೇಬೇಕು ಎನ್ನುವುದನ್ನು ನೆನಪಿಸುವಂತಿದೆ.