ಹೊಸದಿಲ್ಲಿ : ಕಾವೇರಿ ಜಲ ವ್ಯವಸ್ಥಾಪನ ಮಂಡಳಿಯನ್ನು ಸ್ಥಾಪಿಸುವಲ್ಲಿ ಕೇಂದ್ರ ಸರಕಾರ ಅಸಾಮಾನ್ಯ ವಿಳಂಬ ತೋರಿರುವುದನ್ನು ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯ, ಮೇ 8ರ ಒಳಗೆ ಈ ಬಗ್ಗೆ ಅಫಿದಾವಿತ್ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.
ಇದೇ ವೇಳೆ ಕರ್ನಾಟಕ ಸರಕಾರ ತತ್‌ಕ್ಷಣವೇ ತಮಿಳು ನಾಡಿಗೆ 4 ಟಿಎಂಸಿ ಅಡಿ ನೀರನ್ನು ಬಿಡುಗಡೆಮಾಡುವಂತೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಕಾವೇರಿ ಜಲ ವ್ಯವಸ್ಥಾಪನ ಮಂಡಳಿ ಕುರಿತಾದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 8ಕ್ಕೆ ನಿಗದಿಸಿದೆ.
ಕರ್ನಾಟಕದಲ್ಲಿ ಮೇ 12ರಂದು ಚುನಾವಣೆ ನಡೆಯಲಿದ್ದು ಅದಕ್ಕೆ ನಾಲ್ಕು ದಿನಗಳ ಮೊದಲೇ ಕೇಂದ್ರಕ್ಕೆ ಮತ್ತು ಕರ್ನಾಟಕ ಸರಕಾರಕ್ಕೆ ಕಾವೇರಿ ವಿಷಯದಲ್ಲಿ ತೀವ್ರ ಸಂಕಟ ಎದುರಾದಂತಾಗಿದೆ.
ಕಾವೇರಿ ಜಲ ವ್ಯವಸ್ಥಾಪನ ಮಂಡಳಿಯನ್ನು ರೂಪಿಸುವಲ್ಲಿನ ವಿಳಂಬಕ್ಕೆ ಕಾರಣ ನೀಡಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದ ಕೇಂದ್ರ ಸರಕಾರದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು, “ಕಾವೇರಿ ಜಲ ವ್ಯವಸ್ಥಾಪನ ಮಂಡಳಿ ಸ್ಥಾಪನೆ ಕುರಿತಾದ ಕರಡನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಇರಿಸಬೇಕಾಗಿದೆ; ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕೃತ ಕರ್ನಾಟಕ ಚುನಾವಣೆಯಲ್ಲಿ ವ್ಯಸ್ತರಾಗಿರುವುದರಿಂದ ಕರಡು ಅನುಮೋದನೆ ಸಾಧ್ಯವಾಗಿಲ್ಲ’ ಎಂದು ಹೇಳಿದರು. ಆದರೆ ಕೋರ್ಟ್ ಇದರಿಂದ ತೃಪ್ತವಾಗದೇ ಮೇ 8ರೊಳಗೆ ಕಾವೇರಿ ಜಲ ವ್ಯವಸ್ಥಾಪನ ಮಂಡಳಿಯ ರಚನೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಅಫಿದಾವಿತ್ ಸಲ್ಲಿಸುವಂತೆ ಕಟ್ಟಪ್ಪಣೆ ನೀಡಿತು.
ಕಾವೇರಿ ಜಲ ವ್ಯವಸ್ಥಾಪನ ಮಂಡಲಿ ರಚನೆಗೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಈ ವರ್ಷ ಮಾರ್ಚ್ 31ರ ಗಡುವು ನೀಡಿತ್ತು. ಆದರೆ ಕೇಂದ್ರ ಸರಕಾರ ಗಡುವಿಗೆ ಅನುಸಾರವಾಗಿ ನಡೆದುಕೊಂಡಿರಲಿಲ್ಲ. ಅನಂತರ ಸುಪ್ರೀಂ ಕೋರ್ಟ್ ಸಿಎಂಬಿ ಕರಡು ರಚನೆಗೆ ಪುನಃ ಮೇ 3ರ ಗಡುವು ನೀಡಿತ್ತು.
ಕರ್ನಾಟಕದಲ್ಲಿ ಚುನಾವಣೆ ನಡೆಯಲಿರುವುದರಿಂದ ಅಲ್ಲಿನ ಜನರನ್ನು ಓಲೈಸಲು ಕೇಂದ್ರ ಸರಕಾರ ಕಾವೇರಿ ಜಲ ವ್ಯವಸ್ಥಾಪನ ಮಂಡಳಿ ರಚನೆಯನ್ನು ಮುಂದೂಡತ್ತಲೇ ಬಂದು ಉದ್ದೇಶಪೂರ್ವಕವಾಗಿ ತನ್ನ ಕರ್ತವ್ಯದಿಂದ ವಿಮುಖವಾಯಿತು ಎಂದು ತಮಿಳು ನಾಡು ತನ್ನ ಅರ್ಜಿಯಲ್ಲಿ ವಾದಿಸಿತ್ತು.