Advertisement

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

02:49 PM Sep 25, 2024 | Team Udayavani |

ನವದೆಹಲಿ: ನ್ಯಾಯಾಲಯದ ಕಲಾಪದ (Court Sessions) ವೇಳೆ ಮುಸ್ಲಿಮ್‌ ಬಾಹುಳ್ಯದ ಪ್ರದೇಶವನ್ನು ಪಾಕಿಸ್ತಾನ ಎಂದು ಕರೆದ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ ಜಡ್ಜ್‌ ಜಸ್ಟೀಸ್‌ ವೇದವ್ಯಾಸಾಚಾರ್‌ ಶ್ರೀಶಾನಂದ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರಿಂದ ಅವರ ವಿರುದ್ಧದ ಸ್ವಯಂ ಪ್ರೇರಿತ ಕಾನೂನು ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿರುವುದಾಗಿ ಸುಪ್ರೀಂಕೋರ್ಟ್‌ ( Supreme court) ಬುಧವಾರ (ಸೆ.25) ಆದೇಶ ನೀಡಿದೆ.

Advertisement

ಸುಪ್ರೀಂಕೋರ್ಟ್‌ ನ ಚೀಫ್‌ ಜಸ್ಟೀಸ್‌ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪಂಚ ನ್ಯಾಯಾಧೀಶರನ್ನೊಳಗೊಂಡ ಪೀಠವು, ನ್ಯಾಯ ಮತ್ತು ನ್ಯಾಯಾಂಗದ ಮೇಲಿನ ಘನತೆಯ ಹಿತಾಸಕ್ತಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ನ ಜಸ್ಟೀಸ್‌ ಶ್ರೀಶಾನಂದ ಅವರು, ಭೂಮಾಲೀಕರು ಮತ್ತು ಬಾಡಿಗೆದಾರರ ಪ್ರಕರಣದ ವಿಚಾರಣೆ ವೇಳೆ ಗೋರಿಪಾಳ್ಯ ಪ್ರದೇಶವನ್ನು ಪಾಕಿಸ್ತಾನ ಎಂದು ಉಲ್ಲೇಖಿಸಿದ್ದರು.

ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ನಂತರ ವಿವಾದಕ್ಕೀಡಾಗಿ, ಆಕ್ರೋಶ ವ್ಯಕ್ತವಾಗಿತ್ತು. ಇದರ ಪರಿಣಾಮ ಸುಪ್ರೀಂಕೋರ್ಟ್‌ ಕರ್ನಾಟಕ ಹೈಕೋರ್ಟ್‌ ನಿಂದ ವಿವರಣೆ ಕೇಳಿತ್ತು. ಬಳಿಕ ಕರ್ನಾಟಕ ಹೈಕೋರ್ಟ್‌ ತಕ್ಷಣವೇ ವರದಿಯನ್ನು ಸುಪ್ರೀಂಕೋರ್ಟ್‌ ಗೆ ಸಲ್ಲಿಸಿತ್ತು.

“ಯಾರೊಬ್ಬರೂ ಕೂಡಾ ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಬಾರದು” ಎಂದು ಸಿಜೆಐ ಚಂದ್ರಚೂಡ್‌ ತಿಳಿಸಿದ್ದು, ಮೂಲಭೂತವಾಗಿ ಇದು ದೇಶದ ಪ್ರಾದೇಶಿಕತೆಗೆ ವಿರುದ್ಧವಾದದ್ದು. ನ್ಯಾಯಾಲಯದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಡೆಯಲು ಈ ನಿರ್ಧಾರವಲ್ಲ, ಅದನ್ನು ಸಮರ್ಥಿಸುವುದಿಲ್ಲ ಎಂಬುದೇ ನಮ್ಮ ಉತ್ತರವಾಗಿದೆ.”

Advertisement
Advertisement

Udayavani is now on Telegram. Click here to join our channel and stay updated with the latest news.

Next