ಹೊಸದಿಲ್ಲಿ: ಎಕ್ಸಿಟ್ ಪೋಲ್ ಫಲಿತಾಂಶವನ್ನು ಅದಲು ಬದಲು ಮಾಡಿ ಹರ್ಯಾಣ (Haryana) ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (BJP) ವು ಗೆದ್ದು ಸತತ ಮೂರನೇ ಬಾರಿಗೆ ಅಧಿಕಾರ ನಡೆಸಲು ಸಜ್ಜಾಗಿದೆ. ಚುನಾವಣೋತ್ತರ ಫಲಿತಾಂಶಗಳು ಕಾಂಗ್ರೆಸ್ ಗೆ ಅಧಿಕಾರ ಬರಲಿದೆ ಎಂದು ಭವಿಷ್ಯ ನುಡಿದಿದ್ದವು, ಆದರೆ ಮಂಗಳವಾರ (ಅ.08) ನಡೆದ ಮತ ಎಣಿಕೆಯಲ್ಲಿ ಬಿಜೆಪಿಯು ಗೆಲುವು ಸಾಧಿಸಿದೆ.
ಆದರೆ ಈ ಚುನಾವಣೆಯ ತೀರ್ಪಿನಿಂದ ಅಘಾತಕ್ಕೊಳಗಾಗಿರುವ ಕಾಂಗ್ರೆಸ್ ಇದನ್ನು ಒಪ್ಪಲು ಸಿದ್ದವಿಲ್ಲ. ಹರ್ಯಾಣ ಚುನಾವಣೆಯ ಅಪ್ಡೇಟ್ ನ್ನು ನಿಧಾನಗೊಳಿಸಲಾಗಿತ್ತಿದೆ ಎಂದು ಕಾಂಗ್ರೆಸ್ ಮಧ್ಯಾಹ್ನದ ವೇಳೆ ಚುನಾವಣಾ ಸಂಸ್ಥೆಗಳಿಗೆ ದೂರು ನೀಡಿತ್ತು.
ಸಂಜೆ 5 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh), ಹರ್ಯಾಣದ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ, ಸಂಪೂರ್ಣವಾಗಿ ಆಶ್ಚರ್ಯಕರ. ಇದು ವಾಸ್ತವಕ್ಕೆ ವಿರುದ್ಧವಾಗಿದೆ. ಹರ್ಯಾಣದ ಜನರು ಬದಲಾವಣೆ ಮತ್ತು ಪರಿವರ್ತನೆಗಾಗಿ ಮನಸ್ಸು ಮಾಡಿದ್ದಕ್ಕೆ ಇದು ವಿರುದ್ಧವಾಗಿದೆ. ಹೀಗಿರುವಾಗ ಇಂದು ಪ್ರಕಟವಾಗಿರುವ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹರ್ಯಾಣದಲ್ಲಿ ನಾವು ಇಂದು ನೋಡಿರುವುದು ಕುಯುಕ್ತಿಯ ಗೆಲುವು, ಜನರ ಇಚ್ಛೆಯನ್ನು ಬುಡಮೇಲು ಮಾಡಿದ ವಿಜಯವಾಗಿದೆ. ಇದು ಪಾರದರ್ಶಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಸೋಲು. ಹರಿಯಾಣದ ಅಧ್ಯಾಯವು ಪೂರ್ಣಗೊಂಡಿಲ್ಲ” ಎಂದು ಕಿಡಿಕಾರಿದ್ದಾರೆ.
ಹರಿಯಾಣದ ಕನಿಷ್ಠ ಮೂರು ಜಿಲ್ಲೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (EAM) ಎಣಿಕೆಯ ಪ್ರಕ್ರಿಯೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ದೂರುಳಿವೆ. ಇನ್ನೂ ಹೆಚ್ಚಿನ ದೂರುಗಳು ಬರುತ್ತಿವೆ. ಈ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ಇಂದು ಅಥವಾ ನಾಳೆ ಚುನಾವಣಾ ಆಯೋಗಕ್ಕೆ ಪ್ರಸ್ತುತಪಡಿಸುತ್ತೇವೆ” ಎಂದು ಅವರು ಹೇಳಿದರು.
“ಈ ವ್ಯವಸ್ಥೆಯ ಸಾಧನಗಳಾದ ಇವಿಎಂಗಳ ಸಮಗ್ರತೆ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳ ಮೇಲೆ ತರಲಾದ ಅಸಾಧಾರಣ ಒತ್ತಡದ ಬಗ್ಗೆ ಗಂಭೀರ ಪ್ರಶ್ನೆಗಳಿವೆ. ಹರ್ಯಾಣವು ‘ಡಬಲ್ ಇಂಜಿನ್’ ಸರ್ಕಾರವಾಗಿದೆ, ಆದ್ದರಿಂದ ಇಲ್ಲಿ ‘ಡಬಲ್’ ಒತ್ತಡವಿತ್ತು. ಉತ್ತಮ ಅಂತರದಿಂದ ಮುನ್ನಡೆ ಸಾಧಿಸಿದ್ದ ಅಭ್ಯರ್ಥಿಗಳು 50, 100, 250 ಮತಗಳಿಂದ ಸೋತಿದ್ದಾರೆ. ಇದು ಒತ್ತಡ ಮತ್ತು ತಿರುಚುವಿಕೆಯಿಂದ ಮಾತ್ರ ಸಾಧ್ಯ ಎಂದು ಜೈರಾಮ್ ರಮೇಶ್ ಹೇಳಿದರು.