ಬೆಂಗಳೂರು: ರಿಯಾಯ್ತಿ ದರದಲ್ಲಿ ಉಪಾಹಾರ ಮತ್ತು ಭೋಜನ ವಿತರಿಸುವ “ಇಂದಿರಾ ಕ್ಯಾಂಟೀನ್’ ನಿರ್ಮಾಣ, ತಂತ್ರಜ್ಞಾನ, ವಿನ್ಯಾಸ, ಲಾಂಛನ ಸೇರಿದಂತೆ ಇತರೆ ರೂಪುರೇಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಅಂತಿಮ ಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದರಂತೆ 28 ಕ್ಷೇತ್ರಗಳಲ್ಲಿ ಅಡುಗೆ ಮನೆ ನಿರ್ಮಾಣಕ್ಕೂ ಸಿದ್ಧತೆ ಆರಂಭಿಸುವುದಾಗಿ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಕ್ಯಾಂಟೀನ್‌ಗೆ ಸಂಬಂಧಿಸಿದಂತೆ ಸಿಎಂ ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಾಲಿಕೆಯ 198 ವಾರ್ಡ್‌ಗಳಲ್ಲಿ ತಲಾ ಒಂದು ಹಾಗೂ ಕೇಂದ್ರ ಕಚೇರಿಯಲ್ಲಿ ಒಂದು ಸೇರಿದಂತೆ ಒಟ್ಟು 199 ಕ್ಯಾಂಟೀನ್‌ಗಳಿಗೆ ಏಕರೂಪದ ವಿನ್ಯಾಸವನ್ನು ಮುಖ್ಯಮಂತ್ರಿಗಳು ಅಂತಿಮಗೊಳಿಸಿದ್ದಾರೆ.
ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಡ ನಿರ್ಮಿಸದೆ ಪ್ರೀಕಾಸ್ಟ್ ತಂತ್ರಜ್ಞಾನದಡಿ ಕ್ಯಾಂಟೀನ್ ನಿರ್ಮಿಸಬೇಕು. ತಲಾ 860 ಚದರ ಅಡಿ ವಿಸ್ತೀರ್ಣದಲ್ಲಿ ಜುಲೈ 15ರೊಳಗೆ ಕ್ಯಾಂಟೀನ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಮುಖ್ಯ ಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆಗಾಲ ಆರಂಭವಾಗಲಿರುವ ಹಿನ್ನೆಲೆ ಯಲ್ಲಿ ಕಾಂಕ್ರೀಟ್ ಕಟ್ಟಡವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರೀಕಾಸ್ಟ್ ಕನ್‌ಸ್ಟ್ರಕ್ಷನ್ ತಂತ್ರಜ್ಞಾನದಡಿ ನಿರ್ಮಾಣಗೊಂಡ ಸಾಮಗ್ರಿಗಳನ್ನು ಬಳಸಿದರೆ ತ್ವರಿತವಾಗಿ ಕ್ಯಾಂಟೀನ್ ನಿರ್ಮಿಸಬಹುದು. ಇವು 60 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರಲಿವೆ.
ಯಂತ್ರಗಳನ್ನು ಬಳಸಿ ಅಂತಿಮ ಸ್ಪರ್ಶ ನೀಡುವುದರಿಂದ ಆಕರ್ಷಕವಾಗಿಯೂ ಕಾಣುತ್ತವೆ ಎಂಬುದಾಗಿ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾವ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳುನಾಡು ಮೂಲದ ಕೆಇಎಫ್ ಇನ್‌ಫ್ರಾ ಕಂಪನಿಯು ತಲಾ 32 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟೀನ್ ನಿರ್ಮಿಸಿಕೊಡುವುದಾಗಿ ಪ್ರಸ್ತಾವ ಸಲ್ಲಿಸಿದೆ.
ಸಭೆಯ ಬಳಿಕ ಪ್ರತಿಕ್ರಿಯಿಸಿದ ಆಯುಕ್ತ ಎನ್.ಮಂಜುನಾಥ ಪ್ರಸಾದ್, “ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ 199 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ಅಡುಗೆ ಮನೆ ನಿರ್ಮಿಸಲಾಗುವುದು. ಅಡುಗೆಮನೆಗೆ ಅಗತ್ಯವಾದ ಯಂತ್ರೋಪಕರಣಗಳು, ಸಾಧನಗಳನ್ನು ಬಿಬಿಎಂಪಿಯೇ ಸ್ವಂತ ವೆಚ್ಚದಲ್ಲಿ ಪೂರೈಸಲಿದೆ. ಗುಣಮಟ್ಟ ಹಾಗೂ ರುಚಿಯಲ್ಲಿ ಯಾವುದೇ ರಾಜಿಯಿಲ್ಲದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ನಿರ್ವಹಣೆಯಲ್ಲಿ ಲೋಪಗಳಾದರೆ ನಿರ್ವಹಣಾ ಟೆಂಡರ್ ರದ್ದುಪಡಿಸಲಾಗುವುದು ಎಂದು ಹೇಳಿದರು. ಮೇಯರ್ ಜಿ.ಪದ್ಮಾವತಿ ಪ್ರತಿಕ್ರಿಯಿಸಿ, ಸ್ವಯಂಸೇವಾ ಸಂಘಗಳು, ಸ್ತ್ರೀಶಕ್ತಿ ಸಂಘಗಳು ಹಾಗೂ ಸರ್ಕಾರೇತರ ಸಂಘಗಳಿಂದ ಟೆಂಡರ್ ಆಹ್ವಾನಿಸಲಾಗುವುದು. ಕನಿಷ್ಠ 33 ಕ್ಯಾಂಟೀನ್ ಹಾಗೂ ಅದರ ಅಡುಗೆ ಮನೆಗಳನ್ನು ಸ್ತ್ರೀಶಕ್ತಿ ಸಂಘಗಳಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.