Advertisement
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ, ನಿವೃತ್ತ ಮುಖ್ಯ ನ್ಯಾಯಾಧೀಶ ಎನ್.ವೈ. ಹನುಮಂತಪ್ಪ ಅವರ ಪುತ್ರ ಎನ್.ವೈ. ಸುಜಯ್ ಸೇರಿ ಹಲವರು ಅರ್ಜಿ ಸಲ್ಲಿಸಿದ್ದು, ಈ ಎಲ್ಲರ ಹೆಸರನ್ನು ರಾಜ್ಯಾಧ್ಯಕ್ಷರಿಗೆ ಕಳುಹಿಸಲಾಗುವುದು. ಕಳೆದ ಒಂದು ದಶಕದಿಂದ ಬಳ್ಳಾರಿ ಜಿಲ್ಲೆ ಬಿಜೆಪಿಯ ಭದ್ರ ಕೋಟೆಯಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿರುವ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪರ ಒಲವಿದೆ ಎಂದರು.
ಈ ಉಪಚುನಾವಣೆ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವರ್ಸಸ್ ಶಾಸಕ ಬಿ.ಶ್ರೀರಾಮುಲು ಮಧ್ಯೆ ಅಲ್ಲ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಿಯೇ ನಾವು ಚುನಾವಣೆ ಎದುರಿಸುತ್ತೇವೆ. ಈ ಉಪಚುನಾವಣೆ ಹಾಗೂ 2019ರಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲೂ ಜಿಲ್ಲೆಯಲ್ಲಿ ಬಿಜೆಪಿಗೆ ಜಯ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಿ.ಕೆ. ಶಿವಕುಮಾರ್ ಅವರು ಎಷ್ಟೇ ಪ್ರಭಾವಿ ಸಚಿವರಾಗಿರಬಹುದು. ಅವರ ಬಳಿ ಸರಕಾರವೇ ಇರಬಹುದು. ಆದರೆ, ಅವರ ಶಕ್ತಿ ಅವರಿಗೆ, ನಮ್ಮ ಶಕ್ತಿ ನಮಗೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ರಾಜ್ಯ ನಾಯಕರು ಮತಗಟ್ಟೆಗಳಲ್ಲಿ ಬಂದು ಕುಳಿತರೂ ತೊಂದರೆಯಿಲ್ಲ. ಕಾರ್ಯಕರ್ತರೇ ನಮ್ಮ ಶಕ್ತಿ ಎಂದು ಹೇಳಿದರು.