Advertisement

ತರ್ಕಸ್‌ಪೇಟೆಗೆ ಬಾರದ ಅಭ್ಯರ್ಥಿಗಳು

01:08 PM May 01, 2018 | Team Udayavani |

ವಾಡಿ: ಎಲ್ಲೆಡೆ ಹಳ್ಳಿ ಕಟ್ಟೆಗಳಿಗೆ ಚುನಾವಣೆ ಜ್ವರ ತಗುಲಿದ್ದು, ಗ್ರಾಮಸ್ಥರು ಮತ ಪ್ರಚಾರದ ಗುಂಗಿನಲ್ಲಿದ್ದಾರೆ. ಆದರೆ, ಈ
ಗ್ರಾಮದಲ್ಲಿ ರಾಜಕೀಯ ಚಟುವಟಿಕೆಗಳೇ ಸ್ಥಬ್ದವಾಗಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿದಂತೆ ಯಾವ ಪಕ್ಷದ ಅಭ್ಯರ್ಥಿಗಳೂ ಈ ಗ್ರಾಮಕ್ಕೆ ಕಾಲಿಟ್ಟಿಲ್ಲ. ರಾಜಕೀಯ ಘೋಷಣೆಗಳಿಲ್ಲ. ಗೋಡೆಗಳಿಗೆ ಬರಹಗಳಿಲ್ಲ. ಮತಯಾಚಿಸುವರರ ದಂಡಿಲ್ಲ. ಒಟ್ಟಾರೆ ಚುನಾವಣೆಯ ಯಾವ ಲಕ್ಷಣವೂ ಈ ಗ್ರಾಮದಲ್ಲಿ ಕಂಡು ಬರುತ್ತಿಲ್ಲ.

Advertisement

ನಮ್ಮೂರಿಗೆ ಬಂದು ಮತ ಕೇಳಲು ಯಾರಿಗೆ ಧೈರ್ಯವಿದೆ ನೋಡ್ತೀವಿ ಎಂದು ಗ್ರಾಮಸ್ಥರು ಗುಡುಗಿದ್ದರಿಂದ ಪ್ರಚಾರಕ್ಕೆ ಬರಲು ಅಭ್ಯರ್ಥಿಗಳು ಹೆದರುತ್ತಿದ್ದಾರೆ. ಕಾಂಗ್ರೆಸ್‌ನಿಂದ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಬಿಜೆಪಿಯಿಂದ ವಾಲ್ಮೀಕಿ ನಾಯಕ ಕಣದಲ್ಲಿರುವ ಚಿತ್ತಾಪುರ ಮೀಸಲು ಮತಕ್ಷೇತ್ರದ ನಾಲವಾರ ಹೋಬಳಿ ವ್ಯಾಪ್ತಿಯಲ್ಲಿ ಬರುವ ತರ್ಕಸ್‌ ಪೇಟೆ ಗ್ರಾಮಕ್ಕೆ ಬರಲು ರಾಜಕಾರಣಿಗಳು ಹಿಂದೇಟು ಹಾಕುತ್ತಿದ್ದಾರೆ. 

ಗ್ರಾಮಸ್ಥರು ಮತದಾನ ಬಹಿಷ್ಕಾರ ಬೆದರಿಕೆಗೆ ಹೆದರಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರುಗಳೆಲ್ಲ ಗ್ರಾಮದಲ್ಲಿ ಮತಪ್ರಚಾರ ಕೈಬಿಟ್ಟಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ ಏಳು ಜನ ಅಭ್ಯರ್ಥಿಗಳು ಸಹ ಇತ್ತ ಸುಳಿದಿಲ್ಲ. ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಮತದಾರರನ್ನು ಭೇಟಿ ಮಾಡುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆ ಹಾಗೂ ಬಿಜೆಪಿಯ ವಾಲ್ಮೀಕಿ ನಾಯಕ ತರ್ಕಸ್‌ಪೇಟೆಯತ್ತ ಮುಖ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಗ್ರಾಮಕ್ಕೆ ಮಂಜೂರಾಗಿದ್ದ ಗ್ರಾಪಂ ಕೇಂದ್ರ ಸ್ಥಾನಮಾನವು ಪಕ್ಕದ ಮತ್ತೂಂದು ಗ್ರಾಮಕ್ಕೆ ವರ್ಗಾಯಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಅವಕಾಶ ತಪ್ಪಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ನಮ್ಮ ನೆರವಿಗೆ ಬಿಜೆಪಿಯವರು ಸೇರಿದಂತೆ ಯಾರೂ ಬರಲಿಲ್ಲ ಎನ್ನುವುದೇ ಗ್ರಾಮಸ್ಥರ ಆಕ್ರೋಶ ಭುಗಿಲೇಳಲು
ಕಾರಣವಾಗಿದೆ. ಆದ್ದರಿಂದ ಚುನಾವಣೆ ಬಹಿಷ್ಕಾರ ನಿರ್ಧಾರ ಪ್ರಕಟಿಸಿದ್ದಾರೆ. 

ಕೊಲ್ಲೂರ ಗ್ರಾಪಂ ವಿಂಗಡಿಸಿ ರಾಂಪುರಹಳ್ಳಿ, ತರ್ಕಸ್‌ಪೇಟೆ ಹಾಗೂ ಮಾರಡಗಿ ಗ್ರಾಮಗಳ ಮಧ್ಯೆ ಹೊಸ ಗ್ರಾಪಂ ಘೋಷಣೆಯಾಗಿತ್ತು. ಗ್ರಾಪಂ ಕೇಂದ್ರ ಸ್ಥಾನಮಾನಕ್ಕಾಗಿ ತರ್ಕಸ್‌ಪೇಟೆ ಮತ್ತು ರಾಂಪುರಹಳ್ಳಿ ಗ್ರಾಮಸ್ಥರ ಮಧ್ಯೆ ಹಗ್ಗಜಗ್ಗಾಟ ನಡೆದು ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು.

Advertisement

ರಾಂಪುರಹಳ್ಳಿಗೆ ಗ್ರಾಪಂ ಸ್ಥಾನಮಾನ ದಕ್ಕಿದ್ದರಿಂದ ಅಸಮಾಧಾನಗೊಂಡ ತರ್ಕಸ್‌ಪೇಟೆ ಗ್ರಾಮಸ್ಥರು, ಹೋರಾಟದ ಮುಂದುವರಿದ ಭಾಗವಾಗಿ ಚುನಾವಣೆ ಬಹಿಷ್ಕಾರ ನಿರ್ಧಾರ ಮಾಡಿರುವುದು ಅಧಿಕಾರಿಗಳಿಗೆ ಹಾಗೂ ರಾಜಕೀಯ ಪಕ್ಷಗಳ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಚುನಾವಣಾ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನಪರಿವರ್ತನೆಗೆ ಪ್ರಯತ್ನ ನಡೆಸಿದ್ದಾರಾದರೂ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಗ್ರಾಪಂ ಸ್ಥಾನಮಾನ ನೀಡುವ ಭರವಸೆ ನೀಡುವುದಾದರೆ ಮಾತ್ರ ಮತದಾನದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಗ್ರಾಮದ ಹಿರಿಯ ಮುಖಂಡರು ಪ್ರತಿಕ್ರಿಯಿಸಿರುವುದು ಕಾಂಗ್ರೆಸ್‌-ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. 

ನಮ್ಮೂರಿಗೆ ಗ್ರಾಪಂ ಸ್ಥಾನಮಾನ ಸಿಗಲು ಎಲ್ಲ ಅರ್ಹತೆಗಳಿದ್ದರೂ ಶಾಸಕರು ಅವಕಾಶ ತಪ್ಪಿಸಿದ್ದಾರೆ. ಅನ್ಯಾಯ ಪ್ರತಿಭಟಿಸಿ ಹೋರಾಟಕ್ಕಿಳಿದರೂ ಬಿಜೆಪಿಯವರಾಗಲಿ ಅಥವಾ ಬೇರೆ ಯಾವೂದೇ ಪಕ್ಷದವರಾಗಲಿ ನಮ್ಮೊಂದಿಗೆ ನಿಂತಿಲ್ಲ. ರಾಜಕಾರಣಿಗಳ ಮೇಲೆ ಇಡೀ ಗ್ರಾಮಸ್ಥರಿಗೆ ಅಸಮಾಧನವಿದೆ. ಹೀಗಾಗಿ ಚುನಾವಣೆ ಬಹಿಷ್ಕಾರ ನಿರ್ಧಾರಕ್ಕೆ ಬಂದಿದ್ದೇವೆ. ನ್ಯಾಯ ಒದಗಿಸುವುದಾಗಿ ಲಿಖೀತ ಭರವಸೆ ನೀಡಿದರೆ ಮಾತ್ರ ನಿರ್ಧಾರ ಹಿಂಪಡೆಯುತ್ತೇವೆ. 
 ದಾನಪ್ಪಗೌಡ ನೀಲಗಲ್‌, ಹಿರಿಯ ಮುಖಂಡ ತರ್ಕಸ್‌ಪೇಟೆ

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next