ಬೆಂಗಳೂರು: ಲೋಕಸಭೆ ಚುನಾವಣೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಧಿಕಾರ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡುವ ಬಗ್ಗೆ ಚಿಂತನೆ ನಡೆದಿದೆ.
ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರ ಅಭಿಪ್ರಾಯಕ್ಕೆ ಮನ್ನಣೆ
ನೀಡದಿರುವುದರಿಂದ ಹಿನ್ನಡೆಯುಂಟಾಯಿತು ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ರಾಜ್ಯದ 28 ಕ್ಷೇತ್ರಗಳ ರಾಜಕೀಯ ಚಿತ್ರಣ ಹಾಗೂ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸೀಟು ಗೆಲ್ಲಲು ರೂಪಿಸಿರುವ ಕಾರ್ಯತಂತ್ರ ಕುರಿತು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಬಲ ಹೆಚ್ಚಾಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಅವಕಾಶವಿದೆ ಎಂಬುದನ್ನು ಯಡಿಯೂರಪ್ಪ ಅಮಿತ್ ಶಾ ಬಳಿ ಹೇಳಿದ್ದು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಲಾಗಿದೆ.
ಉ.ಕ. ಭಾಗದ ಅಭ್ಯರ್ಥಿಗಳ ಆಯ್ಕೆ ಹೊಣೆಗಾರಿಕೆ ಬಿಎಸ್‌ವೈಗೆ ನೀಡಿ ಕರಾವಳಿ, ಮಲೆನಾಡು ಭಾಗದಲ್ಲಿ ಅಭ್ಯರ್ಥಿಗಳ ಆಯ್ಕೆ ಆರ್‌ಎಸ್‌ಎಸ್ ಸಲಹೆಯಂತೆ ತೀರ್ಮಾನ ಕೈಗೊಳ್ಳುವುದು. ಹಳೇ ಮೈಸೂರು ಭಾಗದಲ್ಲೂ ಯಡಿಯೂರಪ್ಪ ಕೊಟ್ಟಿರುವ ಮಾಹಿತಿ, ಆರ್‌ಎಸ್‌ಎಸ್ ಸಲ್ಲಿಸಿರುವ ವರದಿ ಪರಿಗಣಿಸಿ ರಾಜ್ಯ ಕೋರ್ ಕಮಿಟಿಯಲ್ಲಿರುವ ಇತರೆ ಸದಸ್ಯರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿದೆ.