Advertisement

ಪರಿಷತ್‌ ಚುನಾವಣೆಗೆ ಅಭ್ಯರ್ಥಿಗಳು ಫೈನಲ್‌

06:00 AM May 31, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ಜೂನ್‌ 11 ರಂದು ನಡೆಯಲಿರುವ ಚುನಾವಣೆಗೆ ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಫೈನಲ್‌ ಮಾಡಿದ್ದು, ವಿಧಾನಸಭೆಯಲ್ಲಿ ಸಂಖ್ಯಾಬಲ ಆಧಾರದ ಮೇಲೆ ಬಿಜೆಪಿ ಐದು, ಕಾಂಗ್ರೆಸ್‌ ನಾಲ್ಕು ಹಾಗೂ ಜೆಡಿಎಸ್‌ ಎರಡು ಸ್ಥಾನ ಗೆಲ್ಲುವ ಅವಕಾಶವಿದೆ.

Advertisement

ಬಿಜೆಪಿಯಿಂದ ರಘುನಾಥ್‌ ರಾವ್‌ ಮಲ್ಕಾಪುರೆ, ತೇಜಸ್ವಿನಿ ಗೌಡ, ಎನ್‌.ರವಿಕುಮಾರ್‌, ಕೆ.ಪಿ.ನಂಜುಂಡಿ ಹಾಗೂ ಎಸ್‌.ರುದ್ರೇಶ್‌ ಗೌಡ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿದೆ.


ಕಾಂಗ್ರೆಸ್‌ನಿಂದ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜು, ದಕ್ಷಿಣ ಕನ್ನಡ ಕಾಂಗ್ರೆಸ್‌ ಘಟಕದ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಹಾಗೂ ಅರವಿಂದಕುಮಾರ್‌ ಅರಳಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಇನು, ಜೆಡಿಎಸ್‌ನಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಬಿ.ಎ.ಫ‌ರೂಕ್‌ ಹಾಗೂ ಪಾಲಿಕೆಯ ಮಾಜಿ ಆಯುಕ್ತ ಡಾ.ಸುಬ್ರಹ್ಮಣ್ಯ ಅವರನ್ನು ಕಣಕ್ಕಿಳಿಸಲು ಬಹುತೇಕ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಹನ್ನೊಂದು ಸ್ಥಾನಗಳಿಗೆ ಹನ್ನೊಂದು ಅಭ್ಯರ್ಥಿಗಳು ಮಾತ್ರ ಘೋಷಣೆಯಾದರೆ ಬಹುತೇಕ ಅವಿರೋಧ ಆಯ್ಕೆಯಾಗಲಿದೆ. 

ಪ್ರಸ್ತುತ ನಿವೃತ್ತಿಯಾಗುತ್ತಿರುವವರ ಪೈಕಿ ಕಾಂಗ್ರೆಸ್‌ನಿಂದ ಸಿ.ಎಂ.ಇಬ್ರಾಹಿಂ ಹಾಗೂ ಕೆ.ಗೋವಿಂದರಾಜು ಅವರಿಗೆ ಹಾ‌ಗೂ ಬಿಜೆಪಿಯಿಂದ ರಘುನಾಥ್‌ರಾವ್‌ ಮಲ್ಕಾಪುರೆ ಅವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಕಾಂಗ್ರೆಸ್‌ನಲ್ಲಿ ಜಾತಿ ಲೆಕ್ಕಾಚಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದ್ದು ಒಕ್ಕಲಿಗ ಸಮುದಾಯದ ಕೆ.ಗೋವಿಂದರಾಜು, ಮುಸ್ಲಿಂ ಸಮುದಾಯಕ್ಕೆ ಸಿ.ಎಂ.ಇಬ್ರಾಹಿಂಗೆ ಅವಕಾಶ ಮಾಡಿಕೊಡಲಾಗಿದೆ.  ಈಡಿಗ ಸಮುದಾಯದ ಹರೀಶ್‌ಕುಮಾರ್‌ ಹಾಗೂ ದಲಿತ ಸಮುದಾಯದ ಬಲಗೈ ಪಂಗಡ‌ದ ಅರವಿಂದಕುಮಾರ್‌ ಅರಳಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. 

ಈ ಹಿಂದೆ ಮೋಟಮ್ಮ ಅವರು ದಲಿತ ಸಮುದಾಯವನ್ನು ಪ್ರತಿನಿಧಿಸುತ್ತಿದ್ದರೆ, ಎಂ.ಆರ್‌. ಸೀತಾರಾಂ ಹಿಂದುಳಿದ ವರ್ಗದ ಪ್ರತಿನಧಿಯಾಗಿದ್ದರು. ಇದೀಗ ಅಭ್ಯರ್ಥಿ ಬದಲಾದರೂ ಸಮುದಾಯಕ್ಕೆ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ರಾಣಿ ಸತೀಶ್‌, ವೀರಣ್ಣ ಮತ್ತಿಕಟ್ಟಿ ಅವರು ಮೇಲ್ಮನೆ ಟಿಕೆಟ್‌ ಆಕಾಂಕ್ಷಿಗಳಾಗಿದ್ದರೂ ಅವಕಾಶ ನಿರಾಕರಿಸಲಾಗಿದೆ. 

Advertisement

ಬಿಜೆಪಿಯಲ್ಲಿ ಹಿಂದುಳಿದ ವಿಶ್ವಕರ್ಮ ಸಮುದಾಯದ ಕೆ.ಪಿ.ನಂಜುಂಡಿ, ಕುರುಬ ಸಮುದಾಯದ ರಘುನಾಥ್‌ರಾವ್‌ ಮಲ್ಕಾಪುರೆ, ಒಕ್ಕಲಿಗ ಸಮುದಾಯದ ತೇಜಸ್ವಿನಿಗೌಡ, ಲಿಂಗಾಯಿತ ಸಮುದಾಯದ ಎಸ್‌.ರುದ್ರೇಗೌಡ, ಹಿಂದುಳಿದ ಸಮುದಾಯದ ಎನ್‌.ರವಿಕುಮಾರ್‌ಗೆ ಅವಕಾಶ ಕಲ್ಪಿಸಲಾಗಿದೆ.

ಜೆಡಿಎಸ್‌ನಲ್ಲಿ ಮುಸ್ಲಿಂ ಸಮುದಾಯದ ಬಿ.ಎಂ.ಫ‌ರೂಕ್‌ ಹಾಗೂ ಬ್ರಾಹ್ಮಣ ಸಮುದಾಯದ ಡಾ.ಸುಬ್ರಹ್ಮಣ್ಯ ಅವರಿಗೆ ಆವಕಾಶ ಮಾಡಿಕೊಡಲಾಗಿದೆ. ದಲಿತ ಸಮುದಾಯದ ಎಡಗೈಗೆ ಸೇರಿದ ಗೋನಾಳ್‌ ಭೀಮಪ್ಪ ಅವರ ಹೆಸರು ಕೇಳಿ ಬಂದಿತ್ತಾದರೂ ಅಂತಿಮವಾಗಿ ಸುಬ್ರಹ್ಮಣ್ಯ ಅವರಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next