ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಕಾರ್ಯಾಚರಣೆ ಮತ್ತು ನಿರ್ವಹಣೆ ಹೊರಗುತ್ತಿಗೆ ಬೆನ್ನಲ್ಲೇ ಬಿಎಂಆರ್‌ಸಿಎಲ್‌ನ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಡೋಲಾಯಮಾನವಾಗಿದ್ದು, ನೂರಾರು ಅಭ್ಯರ್ಥಿಗಳ ಭವಿಷ್ಯದ ಮೇಲೆ ಈಗ ತೂಗುಗತ್ತಿ ನೇತಾಡುತ್ತಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕೆಲವೇ ತಿಂಗಳುಗಳ ಹಿಂದೆ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ 174 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆದು, ಆಯ್ಕೆ ಪಟ್ಟಿಯ ಎದುರುನೋಡುತ್ತಿದ್ದಾರೆ. ಈ ಮಧ್ಯೆ ಅದೇ ವಿಭಾಗವನ್ನು ಹೊರಗುತ್ತಿಗೆ ನೀಡಲು ಮೆಟ್ರೋ ಮಂಡಳಿಯ ಸಭೆಯಲ್ಲಿ ಸದ್ದಿಲ್ಲದೆ ತೀರ್ಮಾನ ಕೈಗೊಂಡಿದೆ. ಹಾಗಾಗಿ, ಅವರೆಲ್ಲರೂ ಈಗ ಅತಂತ್ರರಾಗಿದ್ದಾರೆ.
ನಿಗಮದ ಮೂಲಗಳ ಪ್ರಕಾರ ಕೇವಲ 50ರಿಂದ 55 ಹುದ್ದೆಗಳಿಗೆ ನೇಮಕ ಮಾಡಿ, ಉಳಿದ ಹುದ್ದೆಗಳನ್ನು ರದ್ದುಗೊಳಿಸುವ ಚಿಂತನೆ ನಡೆದಿದೆ. ಹಾಗೊಂದು ವೇಳೆ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿದರೆ, ಈ ಹಿಂದಿದ್ದ ಕೆಲಸವನ್ನು ಬಿಟ್ಟು, ಹಗಲು-ರಾತ್ರಿ ಓದಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಶ್ರಮ ನಿರರ್ಥಕವಾಗಲಿದೆ.
2018ರಲ್ಲಿ ಬಿಎಂಆರ್‌ಸಿಎಲ್ ನಿರ್ವಹಣೆಗಾರ ಹುದ್ದೆಗೆ 134, ಜೂನಿಯರ್ ಎಂಜಿನಿಯರ್ 21, ವಿಭಾಗದ ಎಂಜಿನಿಯರ್ 19 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಇವುಗಳ ನೇಮಕಾತಿಗೆ 2019ರ ಫೆಬ್ರವರಿಯಲ್ಲಿ ಪರೀಕ್ಷೆ ನಡೆದಿತ್ತು. ಸುಮಾರು 40 ಸಾವಿರ ಜನ ಪರೀಕ್ಷೆ ಬರೆದಿದ್ದರು. ಇದಾದ ನಂತರ ಮೇನಲ್ಲಿ ನಿಗಮವು “ಕೀ’ ಉತ್ತರಗಳನ್ನೂ ಪ್ರಕಟಿಸಿತ್ತು. ಆದರೆ, ಇನ್ನೂ ಪ್ರಥಮ ತಾತ್ಕಾಲಿಕ ಪಟ್ಟಿ ಪ್ರಕಟವಾಗಿರಲಿಲ್ಲ.
“ಕೆಲವರು ಇದ್ದ ಕೆಲಸವನ್ನು ಬಿಟ್ಟು ಮೆಟ್ರೋ ಪರೀಕ್ಷೆ ಬರೆದಿದ್ದಾರೆ. ಸ್ವತಃ ನಾನು ಮೂರು ಬಾರಿ ಪರೀಕ್ಷೆ ಬರೆದಿದ್ದೇನೆ. ಮೊದಲೆರಡು ಬಾರಿ ಕೆಲವೇ ಅಂಕಗಳ ಅಂತರದಿಂದ ಅವಕಾಶ ವಂಚಿತನಾಗಿದ್ದೇನೆ. ಈಗ ಕೀ-ಉತ್ತರಗಳನ್ನು ನೋಡಿದಾಗ, ಆಯ್ಕೆಯಾಗುವ ಭರವಸೆ ಇತ್ತು. ಅಷ್ಟರಲ್ಲಿ ಬಿಎಂಆರ್‌ಸಿಎಲ್ ಈ ಆಘಾತ ನೀಡುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿಯೊಬ್ಬರು
“ಉದಯವಾಣಿ’ಗೆ ಅಲವತ್ತುಕೊಂಡರು.
ಕೂಡಲೇ ಪ್ರಥಮ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಬೇಕು. ಬೆನ್ನಲ್ಲೇ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದರೆ, ಅನಿವಾರ್ಯವಾಗಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಕೆಲ ಅಭ್ಯರ್ಥಿಗಳು ಎಚ್ಚರಿಸಿದರು.
ಹುದ್ದೆ ಖಾಲಿ ಹುದ್ದೆಗಳು ಪರೀಕ್ಷೆ ಬರೆದವರು
ನಿರ್ವಹಣೆಕಾರ 134 18,530
ಜೂನಿಯರ್ ಎಂಜಿನಿಯರ್ 21 9,500
ವಿಭಾಗ ಎಂಜಿನಿಯರ್ 19 11,300
ಒಟ್ಟಾರೆ 174 39,330