Advertisement

ಜನಸ್ನೇಹಿ ಪೊಲೀಸ್‌: ವ್ಯವಸ್ಥೆ ಒಂದು, ಅನುಕೂಲ ನೂರು

01:32 PM Oct 09, 2017 | Team Udayavani |

ಮುಲ್ಕಿ: ಪೊಲೀಸ್‌ ಇಲಾಖೆಯ ಗ್ರಾಮ ಗಸ್ತು ಸಮಿತಿ ಮತ್ತು ಪೊಲೀಸ್‌ ಜನಸ್ನೇಹಿ ಕಾರ್ಯಕ್ರಮ ಗ್ರಾಮೀಣ ಪ್ರದೇಶದ ಕುರಿತಾಗಿ ಇಲಾಖೆಗೆ ಉಪಯುಕ್ತ ಮಾಹಿತಿ ಒದಗಿಸುವ ಜತೆಗೆ ಅಪರಾಧಗಳ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಲು ಸಹಕಾರಿಯಾಗಿದೆ.

Advertisement

ಪ್ರಭಾವಿ ವ್ಯಕ್ತಿಗಳಿಂದ ಹಳ್ಳಿಗಳಲ್ಲಿ ನಡೆಯುತ್ತಿದ್ದ ಅಪರಾಧ ಪ್ರಕರಣಗಳು ಮುಚ್ಚಿ ಹೋಗುವ ಬದಲು ಈಗ ಪೊಲೀಸರ
ಗಮನಕ್ಕೆ ಬರುತ್ತಿವೆ.

ಗ್ರಾಮ ಗಸ್ತು ಯೋಜನೆಯಿಂದಾಗಿ ಗ್ರಾಮಸ್ಥರೊಂದಿಗೆ ಪೊಲೀಸರ ಸಂಪರ್ಕವೂ ಬೆಳೆದಿದೆ. ಗ್ರಾಮಸ್ಥರ ಮಿತ್ರತ್ವ ಪೊಲೀಸರಿಗೆ ಲಭ್ಯವಾಗಿದ್ದು, ಇಲಾಖೆಗೆ ಸಾಕಷ್ಟು ಮಾಹಿತಿಯೂ ಸಿಗುತ್ತಿದೆ. ಪೊಲೀಸರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾ ಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಎಲ್ಲ ಪ್ರಕರಣಗಳಿಗೂ
ಠಾಣೆಗೆ ಬರುವ ಬದಲು ಗ್ರಾಮಕ್ಕೆ ನಿಯುಕ್ತರಾಗಿರುವ ಓರ್ವ ಪೊಲೀಸ್‌ ಸಿಬಂದಿ ಮೂಲಕ ಪರಿಹಾರವಾಗುವ ಅವಕಾಶವಿದೆ. ಇದರಿಂದ ಹಲವು ಪ್ರಕರಣಗಳು ಸೌಹಾರ್ದಯುತವಾಗಿ ಹಾಗೂ ಸುಲಭವಾಗಿ ಬಗೆಹರಿದಿವೆ.

ಇದು ಗ್ರಾಮಸ್ಥರಿಗೂ ಖುಷಿ ಕೊಟ್ಟಿದೆ. ಮಕ್ಕಳ ಶೈಕ್ಷಣಿಕ ವಿಷಯಗಳು, ಉದ್ಯೋಗ ಸಂಬಂಧಿ ತಪಾಸಣೆ,
ಪಾಸ್‌ಪೋರ್ಟ್‌ ಅರ್ಜಿ ಪರಿಶೀಲನೆಯೂ ಸುಲಭವಾಗಿದೆ. ಇಲಾಖೆ ಮೇಲಧಿಕಾರಿಗಳಿಗೂ ತನಿಖೆಯ ಸಂಬಂಧ ಉಪಯುಕ್ತ ಮಾಹಿತಿಗಳು ಬಹುಬೇಗನೆ ಸಿಗುತ್ತಿವೆ.

ಗ್ರಾಮ ಸ್ನೇಹಿ ಪೊಲೀಸ್‌ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ಜನರೂ ಪೊಲೀಸರ ಮೇಲೆ ಹೆಚ್ಚು ವಿಶ್ವಾಸ ಇರಿಸುವಂತಾಗಿದೆ. ತಪ್ಪು ಮಾಡುವವರಲ್ಲಿ ಭಯವನ್ನೂ ಹೆಚ್ಚಿಸಿದೆ. ಸಂಚಾರ ಪೊಲೀಸ್‌ ವ್ಯವಸ್ಥೆಯಲ್ಲೂ ಗ್ರಾಮಸ್ನೇಹಿ
ಪೊಲೀಸ್‌ ವ್ಯವಸ್ಥೆಯ ಪರಿಸರ ನಿರ್ಮಾಣವಾದರೆ ಹೆಚ್ಚು ಪರಿಣಾಮಕಾರಿ ಎಂದು ಸಾರ್ವಜನಿಕ ಅಭಿಪ್ರಾಯವಿದೆ.

Advertisement

ಪೊಲೀಸ್‌ ಸಂಪರ್ಕ ಸಾರ್ವಜನಿಕರಿಗೆ ಹೆಚ್ಚಾಗಿರುವುದರಿಂದಾಗಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದ ಮಟ್ಕಾ, ಜೂಜು, ದೌರ್ಜನ್ಯ ಹಾಗೂ ಚುಡಾವಣೆ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಮಧ್ಯವರ್ತಿಗಳ ಅಗತ್ಯವಿಲ್ಲ
ಜನಸ್ನೇಹಿ ಪೊಲೀಸ್‌ ಕಾರ್ಯಕ್ರಮದ ಸಭೆಯಲ್ಲಿ ಸೇರುವ ಗ್ರಾಮಸ್ಥರಲ್ಲಿ ಪಕ್ಷಭೇದವಿಲ್ಲ. ಮೇಲು- ಕೀಳು, ಗಂಡು- ಹೆಣ್ಣೆಂಬ ತಾರತಮ್ಯವಿಲ್ಲದೆ ಸಾಮರಸ್ಯದಿಂದ ಸಭೆ ಸೇರುತ್ತಾರೆ. ಜನರಿಗೆ ಪೊಲೀಸ್‌ ಇಲಾಖೆಯ ಮೇಲೆ
ಗೌರವ ಬಂದಿದೆ. ಅಪರಾಧಿ ಮನೋಭಾವ ಇಲ್ಲದ ಜನ ತಮ್ಮ ಕೆಲಸಗಳಿಗಾಗಿ ಪೊಲೀಸರನ್ನು ನೇರವಾಗಿ ಸಂಪರ್ಕಿಸಬಹುದು. ಮಧ್ಯವರ್ತಿಗಳ ಅಗತ್ಯವಿಲ್ಲ. ಅಪರಾಧ ಮುಕ್ತ ವಾತಾವರಣ ನಿರ್ಮಾಣಕ್ಕೆ ಇದು ಪೂರಕವಾಗಿದೆ. ಪೊಲೀಸರ ಕೆಲಸಕ್ಕೂ ಸಾಕಷ್ಟು ಅನುಕೂಲವಾಗಿದೆ. ಜನರು ಈ ವ್ಯವಸ್ಥೆಯ ಸದ್ಬಳಕೆ ಮಾಡಿಕೊಳ್ಳಬೇಕಿದೆ.
 – ಅನಂತಪದ್ಮನಾಭ
ಮೂಲ್ಕಿ ಪೊಲೀಸ್‌ ಠಾಣಾಧಿಕಾರಿ

ಹಳ್ಳಿಗಳಲ್ಲಿ ನೆಮ್ಮದಿಯ ವಾತಾವರಣ
ಗಾಮೀಣ ಪ್ರದೇಶದಲ್ಲಿ ಈ ಮೊದಲು ಬಹಳಷ್ಟು ಕಡಿಮೆ ಜನರಿಗೆ ಠಾಣೆಯ ಸಂಪರ್ಕವಿತ್ತು. ಪೊಲೀಸ್‌ ಸಂಪರ್ಕ ಅಗತ್ಯವಿಲ್ಲ ಎಂಬ ಭಾವನೆಯೂ ಇತ್ತು. ಜನಸ್ನೇಹಿ ಪೊಲೀಸ್‌ ಕ್ರಮದಿಂದ ಪೊಲೀಸರಿಂದ ಆಗಬೇಕಾದ ಕಾರ್ಯಗಳು ಹಾಗೂ ನಮ್ಮ ಹಕ್ಕುಗಳ ಅರಿವು ಆಗಿದೆ. ಹಳ್ಳಿಗಳಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತಿದೆ. ಸಮಸ್ಯೆಗಳ ಬಗ್ಗೆ ಇಲಾಖೆ ಪ್ರತಿನಿಧಿಗಳಲ್ಲಿ ಚರ್ಚಿಸುವ ಮುಕ್ತ ಅವಕಾಶ ಸಿಕ್ಕಿದೆ. ಪಾಸ್‌ಪೋರ್ಟ್‌ ಮತ್ತು ಮಕ್ಕಳ ಉದ್ಯೋಗದ ಬಗ್ಗೆ ಪೊಲೀಸ್‌ ವರದಿ ಪಡೆಯಲು ಸುಲಭವಾಗಿದೆ.
ಕುಶಾಲ್‌ ಪೂಜಾರಿ,
ಗುತ್ತಿಗೆದಾರರು, ತಾಳಿಪಾಡಿ

 ಸರ್ವೋತ್ತಮ ಅಂಚನ್‌

Advertisement

Udayavani is now on Telegram. Click here to join our channel and stay updated with the latest news.

Next