Advertisement

ಅಭ್ಯರ್ಥಿ ಹುಕ್ಕೇರಿಗೆ ಶಿಕ್ಷಕರ ಕಾಳಜಿಯಿಲ್ಲ

12:02 PM May 27, 2022 | Team Udayavani |

ಬೆಳಗಾವಿ: ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಶಿಕ್ಷಕರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಎಲ್ಲಿ ಅಧಿಕಾರ ಸಿಗುತ್ತದೆಯೋ ಅಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ವಾಗ್ಧಾಳಿ ನಡೆಸಿದರು.

Advertisement

ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ವಾಯವ್ಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪ್ರಚಾರಾರ್ಥ ಗುರುವಾರ ಇಲ್ಲಿನ ಸದಾಶಿವನಗರದ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಏನೂ ಗೊತ್ತಿಲ್ಲದ ಹುಕ್ಕೇರಿ ಈಗ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದಾರೆ ಎಂದು ವ್ಯಂಗ ವಾಡಿದರು.

ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ಕಾಂಗ್ರೆಸ್‌ ನ ಪ್ರಕಾಶ ಹುಕ್ಕೇರಿ ಅವರು ಸ್ಪರ್ಧೆ ಸರಿಯಲ್ಲ. ಅವರೊಬ್ಬ ಒಳ್ಳೆಯ ರಾಜಕಾರಣಿ ಇರಬಹುದು. ಆದರೆ ಅವರು ಶಿಕ್ಷಕರಲ್ಲ. ಹೀಗಾಗಿ ಕಣಕ್ಕಿಳಿಯುವ ಅಗತ್ಯತೆ ಇರಲಿಲ್ಲ. ಶಿಕ್ಷಕರ ಮತಕ್ಷೇತ್ರದಿಂದ ಶಿಕ್ಷಕರು ಸ್ಪ‌ರ್ಧಿಸುವುದು ಯೋಗ್ಯ ಎಂಬುದು ನನ್ನ ಅನಸಿಕೆ. ನಾನೂ ಸ್ಪರ್ಧಿಸಬಹುದು. ಆದರೆ ಶಿಕ್ಷಕರು ವಿಚಾರ ಮಾಡುತ್ತಾರೆ. ಇದರ ಬಗ್ಗೆ ನಾವು ಆಲೋಚನೆ ಮಾಡಬೇಕು ಎಂದರು.

ಸಂಸದ, ಶಾಸಕ, ಸಚಿವ, ವಿಧಾನಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ್ದ ಹುಕ್ಕೇರಿ ಈಗ ಅಧಿಕಾರದ ಆಸೆಗಾಗಿ ಮತ್ತೆ ಸ್ಪರ್ಧೆ ಮಾಡಿದ್ದಾರೆ. ದುರ್ದೈವ ಎಂದರೆ ಅವರಿಗೆ ಶಿಕ್ಷಕರ ಕುರಿತು ಸ್ವಲ್ಪವೂ ಗೊತ್ತಿಲ್ಲ. ಅರುಣ ಶಹಾಪುರ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದಾ ಹೋರಾಟ ಮಾಡುತ್ತಿದ್ದರೆ ಪದವೀಧರರ ಕ್ಷೇತ್ರದ ನಮ್ಮ ಅಭ್ಯರ್ಥಿ ಹಣಮಂತ ನಿರಾಣಿ ಯುವಕರಿಗೆ ಉದ್ಯೋಗ ಸೃಷ್ಟಿಸಲು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ದವರು ಹೋದ ಕಡೆಗಳಲೆಲ್ಲ ನಾವು ಗೆಲ್ಲುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಯಾವ ಬದಲಾವಣೆ ತರುತ್ತಾರೆ ಎಂಬುದನ್ನು ಎಲ್ಲಿಯೂ ಹೇಳುತ್ತಿಲ್ಲ. ಆದರೆ ಬಿಜೆಪಿ ಅಭ್ಯರ್ಥಿಗಳು ಸ್ಪಷ್ಟ ಭರವಸೆ ಹಾಗೂ ಬದಲಾವಣೆಯೊಂದಿಗೆ ಮತದಾರರ ಮುಂದೆ ಹೋಗುತ್ತಿದ್ದಾರೆ ಎಂದು ಉಮೇಶ ಕತ್ತಿ ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತಂತೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ನಡುವೆ ಬಹಿರಂಗ ಚರ್ಚೆಯಾಗಲಿ ಎಂದು ಸವಾಲು ಹಾಕಿದರಲ್ಲದೆ ಇದಕ್ಕೊಂದು ವೇದಿಕೆ ನಿರ್ಮಾಣ ಮಾಡಿ ಎಂದು ಸಚಿವ ಉಮೇಶ ಕತ್ತಿ ಅವರಿಗೆ ಸೂಚಿಸಿದರು.

ನಮ್ಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ ಸಜ್ಜನ ರಾಜಕಾರಣಿ. ಈ ಭಾಗದಲ್ಲಿ ಶಿಕ್ಷಣ ನೀರಾವರಿ ಹಾಗೂ ಅಭಿವೃದ್ಧಿ ಕುರಿತಂತೆ ಕಾಳಜಿ ಹೊಂದಿದ್ದಾರೆ. ಇಂತಹ ವ್ಯಕ್ತಿಗಳು ಆಯ್ಕೆಯಾದರೆ ನಮ್ಮ ಘನತೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಮಂಗಲಾ ಅಂಗಡಿ, ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ, ಈರಣ್ಣ ಕಡಾಡಿ, ಶಾಸಕರಾದ ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ಎನ್‌. ಮಹೇಶ್‌, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಅಭ್ಯರ್ಥಿಗಳಾದ ಅರುಣ ಶಹಾಪುರ ಮತ್ತು ಹನುಮಂತ ನಿರಾಣಿ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next