Advertisement

ಕಾಂಗ್ರೆಸ್‌ನ ರಕ್ಷಣಾತ್ಮಕ ಆಟ!?

08:20 AM Apr 18, 2018 | Team Udayavani |

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 8 ಮತ್ತು ಉಡುಪಿಯ ಎಲ್ಲ 5 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಹಾಗೆ ನೋಡಿದರೆ, ಎಲ್ಲ ಅಭ್ಯರ್ಥಿಗಳ ಹೆಸರು ನಿರೀಕ್ಷಿತವೇ ಆಗಿತ್ತು. ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ಜಿಜ್ಞಾಸೆ ಪಕ್ಷದ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ನಡೆದಿತ್ತು. ಆದರೆ ಪಕ್ಷ ಕ್ರಿಕೆಟ್‌ ಆಟದ ಪರಿಭಾಷೆಯಲ್ಲಿ ರಕ್ಷಣಾತ್ಮಕವಾಗಿ ಆಡಿತು!

Advertisement

ಕಾಂಗ್ರೆಸ್‌ನ 13 ಅಭ್ಯರ್ಥಿಗಳ ಕುರಿತು ವಿಶ್ಲೇಷಣೆ ನಡೆಸುವಾಗ ದ.ಕ. ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಒಟ್ಟು ಸ್ಪರ್ಧೆಯ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದು ಅವರು ಬಂಟ್ವಾಳ ಕ್ಷೇತ್ರದಿಂದ ನಡೆಸಲಿರುವ 8ನೇ ಸ್ಪರ್ಧೆ. 1985ರಲ್ಲಿ ಪ್ರಥಮ ಬಾರಿಗೆ ಕಣಕ್ಕೆ ಇಳಿದಾಗ ಅವರಿಗೆ 33ರ ಹರೆಯ. ಅಲ್ಲಿಂದ ಹ್ಯಾಟ್ರಿಕ್‌ ಸಹಿತ ಸತತ 4 ಬಾರಿ ಗೆದ್ದರು. 2004ರಲ್ಲಿ ಬಿಜೆಪಿಗೆ ಸೋತರು. ಮತ್ತೆ ಕಳೆದೆರಡು ಚುನಾವಣೆಗಳಲ್ಲಿ ಜಯಿಸಿದರು. ಆರು ಬಾರಿ ಅವರ ಗೆಲುವು ಕೂಡ ಕಾಂಗ್ರೆಸ್‌ನ ಇನ್ನೊಂದು ಸಾಧನೆ. (ಕಾರ್ಕಳದಲ್ಲಿ ಎಂ. ವೀರಪ್ಪ ಮೊಯಿಲಿ ಅವರು ಸತತ 6 ಬಾರಿ ಜಯಿಸಿದ್ದರು.)


1980ರ ದಶಕದಲ್ಲಿ ಮಂಗಳೂರಲ್ಲಿ ಕಾಂಗ್ರೆಸ್‌ ಪ್ರಚಾರ. — ಸಂಗ್ರಹ ಚಿತ್ರ: ಯಜ್ಞ

ಈ ಬಾರಿಯ ಕಾಂಗ್ರೆಸ್‌ ಅಭ್ಯರ್ಥಿಗಳ ಪೈಕಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಅವರಿಗೆ ಮೂಡಬಿದಿರೆಯಿಂದ ಇದು ಸತತ 5ನೇ ಸ್ಪರ್ಧೆ. ವಿನಯಕುಮಾರ್‌ ಸೊರಕೆ ಅವರಿಗೆ 5ನೇ ಸ್ಪರ್ಧೆ (ಪುತ್ತೂರು 3, ಕಾಪು 2ನೇ). ಬೈಂದೂರಿನ ಗೋಪಾಲ ಪೂಜಾರಿ ಅವರಿಗೆ 6ನೇ ಸ್ಪರ್ಧೆ. ಮಂಗಳೂರಿನಲ್ಲಿ ಯು.ಟಿ. ಖಾದರ್‌, ಕಾರ್ಕಳದಲ್ಲಿ ಎಚ್‌. ಗೋಪಾಲ ಭಂಡಾರಿ, ಸುಳ್ಯದಲ್ಲಿ ಡಾ| ರಘು ಅವರಿಗೆ ಇದು 4ನೇ ಸ್ಪರ್ಧೆ. ಉಡುಪಿಯ ಪ್ರಮೋದ್‌ ಮಧ್ವರಾಜ್‌ಗೆ 4ನೇ (ಒಮ್ಮೆ ಬ್ರಹ್ಮಾವರ) ಸ್ಪರ್ಧೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್‌ ನಿಂದ ಕೆ. ವಸಂತ ಬಂಗೇರ ಅವರಿಗೆ ಮೂರನೇ ಸ್ಪರ್ಧೆ. ಮಂಗಳೂರು ದಕ್ಷಿಣದಿಂದ ಜೆ.ಆರ್‌. ಲೋಬೋ, ಮಂಗಳೂರು ಉತ್ತರದಿಂದ ಮೊದಿನ್‌ ಬಾವಾ, ಪುತ್ತೂರಿನಿಂದ ಶಕುಂತಳಾ ಶೆಟ್ಟಿ ಸತತ 2ನೇ ಬಾರಿ ಕಣದಲ್ಲಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಪ್ರಥಮ ಬಾರಿಗೆ ಸ್ಪರ್ಧಾಕಣದಲ್ಲಿರುವವರು ಕುಂದಾಪುರದಿಂದ ರಾಕೇಶ್‌ ಮಲ್ಲಿ ಅವರು.

ಇಲ್ಲಿ ಕೆಲವು ಹಿರಿಯ ಅಭ್ಯರ್ಥಿಗಳು ಇನ್ನೂ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ ಅನುಭವಿಗಳು. ಬಂಗೇರಗೆ 9ನೇ ಚುನಾವಣೆ. ಶಕುಂತಳಾ ಶೆಟ್ಟರಿಗೆ 4ನೇ ಚುನಾವಣೆ. ಕಾಂಗ್ರೆಸ್‌ನಿಂದ ಅವರು ಸ್ಪರ್ಧಿಸುತ್ತಿರುವ ಸಂಖ್ಯೆಯನ್ನು ಮಾತ್ರ ಇಲ್ಲಿ ಉಲ್ಲೇಖೀಸಲಾಗಿದೆ. ಕಾಂಗ್ರೆಸ್‌ಗೆ ಸಂಬಂಧಿಸಿ ಚುನಾವಣಾ ತಯಾರಿ ಚುರುಕುಗೊಂಡಿವೆ. ಕೆಲವೆಡೆ ಅತೃಪ್ತಿಯೂ ಕಾಣಿಸುತ್ತಿದೆ. ನಾಮಪತ್ರ ಸಲ್ಲಿಕೆಯು ಪಕ್ಷದ ಒಟ್ಟು ಪ್ರಚಾರ ಕಾರ್ಯಕ್ಕೆ ವೇಗವರ್ಧಕವಾಗಬಹುದು.

Advertisement

— ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next