Advertisement

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

07:25 PM Jan 03, 2025 | Team Udayavani |

ಬೆಳಗಾವಿ: ಜಗತ್ತಿನಲ್ಲಿ ಕ್ಯಾನ್ಸರ್ ರೋಗ ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ ಸಂಗತಿ. ಇದಕ್ಕೆ ಕಾರಣಗಳು ಹಲವಾರು. ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತಿದೆ, ಈ ಹಿನ್ನಲೆಯಲ್ಲಿ ಸದೃಢ ಆರೋಗ್ಯದ ಮತ್ತು ಸಕಾಲಿಕ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

Advertisement

ಕೆಎಲ್ಇ ಡಾ ಸಂಪತ್‌ಕುಮಾರ ಶಿವಣಗಿ ನೂತನ ಕ್ಯಾನ್ಸರ್ ಆಸ್ಪತ್ರೆಯನ್ನು ಶುಕ್ರವಾರ(ಜ3) ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು”ಜಾಗತಿಕ ಅಧ್ಯಯನದ ಪ್ರಕಾರ, ಕ್ಯಾನ್ಸರ್ ವಿಶ್ವದ ಸಾವಿಗೆ ಪ್ರಮುಖ ಕಾರಣವಾಗಿದೆ. ಮೂರು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಸುಮಾರು 20 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು 9.7 ಮಿಲಿಯನ್‌ದಷ್ಟು ಸಾವುಗಳು ಸಂಭವಿಸಿವೆ. ಭಾರತದಲ್ಲಿ, ಪ್ರತಿ ಒಂದು ಲಕ್ಷ ಜನರಿಗೆ ಸುಮಾರು 100 ರೋಗಿಗಳಿಗೆ ಕ್ಯಾನ್ಸರ್ ಸಂಭವಿಸುತ್ತದೆ. ಐಸಿಎಂಆರ್ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಕ್ಯಾನ್ಸರ್ ಪ್ರಮಾಣವು 2020 ಕ್ಕೆ ಹೋಲಿಸಿದರೆ 2025 ಲ್ಲಿ ಸುಮಾರು13 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂಬುದು ಆತಂಕದ ಸಂಗತಿ” ಎಂದರು.

ಕ್ಯಾನ್ಸರ್ ರೋಗಿಗಳ ದೈಹಿಕ ಮತ್ತು ಮಾನಸಿಕ ಅಗತ್ಯಗಳನ್ನು ಪರಿಹರಿಸುವ ಸಮಗ್ರ ಆರೈಕೆಯನ್ನು ಒದಗಿಸುವುದು ಆರೋಗ್ಯ ವೃತ್ತಿಪರರ ಕರ್ತವ್ಯ. ವೈದ್ಯರು ಹೇಳುವ ಪ್ರತಿಯೊಂದು ಸಹಾನುಭೂತಿ ಮತ್ತು ವಿಶ್ವಾಸದ ಮಾತುಗಳು ರೋಗಿಯ ಜೀವನವನ್ನು ಉತ್ತಮವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿವೆ.ಕ್ಯಾನ್ಸರ್ ರೋಗದ ಕಾರಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ರಾಷ್ಟ್ರಪತಿ ಮುರ್ಮು ಪ್ರತಿಪಾದಿಸಿದರು.

ರೋಗಿಯ ಮತ್ತು ಕುಟುಂಬದ ಅಜ್ಞಾನದಿಂದ ಅಥವಾ ಹಣಕಾಸಿನ ಅಡಚಣೆಗಳಿಂದಾಗಿ ಚಿಕಿತ್ಸೆಯು ವಿಳಂಬವಾಗುವ ಅನೇಕ ಪ್ರಕರಣಗಳನ್ನು ನಾವು ನೋಡುತ್ತೇವೆ. ಕ್ಯಾನ್ಸರ್ ವಿಷಯದಲ್ಲಿ ಇದು ಮಾರಣಾಂತಿಕ ವೆಂದು ಸಾಬೀತುಪಡಿಸುತ್ತದೆ. ಆದ್ದರಿಂದ ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧದ ಹೋರಾಟವು ಸಾಮೂಹಿಕ ಪ್ರಯತ್ನವಾಗಬೇಕಿದೆ. ರೋಗಿಗಳ ಕೇಂದ್ರಿತ ಮತ್ತು ಸಮಾನವಾದ ಆರೋಗ್ಯ ವ್ಯವಸ್ಥೆಯನ್ನು ರಚಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next