ಹುಬ್ಬಳ್ಳಿ: ಕ್ಯಾನ್ಸರ್ ಕುರಿತು ರೋಗಿಗಳಲ್ಲಿರುವ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ವೈದ್ಯರು ಅವರಿಗೆ ಮನೋಸ್ಥೈರ್ಯ ತುಂಬುವ ಕಾರ್ಯ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಕ್ಲಬ್ ರಸ್ತೆಯ ವಿವೇಕಾನಂದ ಸಂಕೀರ್ಣ ಹಿಂಬದಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸಂಸ್ಥೆಯಲ್ಲಿ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರವು ಲಯನ್ಸ್ ಕ್ಲಬ್ ಹುಬ್ಬಳ್ಳಿ ಪರಿವಾರರ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ರೋಗದ ತಿಳಿವಳಿಕೆ ಮತ್ತು ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಬಹುತೇಕ ಜನರು ತಮಗೆ ಕ್ಯಾನ್ಸರ್ ಬಂದಿದೆ ಎಂಬುದು ಗೊತ್ತಾದ ಕೂಡಲೇ ಭಯಪಟ್ಟು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಹೀಗಾಗಿ ಬಹುತೇಕರು ಸಾವು ಕಾಣುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆಗಿಂತ ಮನೋಸ್ಥೈರ್ಯ ಮುಖ್ಯ. ಈ ಕುರಿತು ವೈದ್ಯರು ರೋಗ ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ವಿಧಾನ ಹಾಗೂ ಕ್ರಮಗಳ ಬಗ್ಗೆ ರೋಗಿಗಳಿಗೆ ಅರಿವು ಮೂಡಿಸಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರೆ ಅದುವೇ ಅವರಿಗೆ ಚೇತೋಹಾರಿ. ಅವರಿಗೆ ಜೀವದಾನ ನೀಡುವ ಕಾರ್ಯ ಮಾಡಬೇಕು ಎಂದರು.
ಶಿಕ್ಷಕರು ಶಿಕ್ಷಣ ನೀಡುವ ಕಾರ್ಯ ಮಾಡಿದರೆ ವೈದ್ಯರು ಸಂಕಷ್ಟದಲ್ಲಿರುವ ರೋಗಿಗಳಿಗೆ ಜೀವದಾನ ಮಾಡುವ ಕೆಲಸ ಮಾಡುತ್ತಾರೆ. ಆ ಮೂಲಕ ಶಿಕ್ಷಕರಿಗಿಂತ ಮಿಗಿಲಾದ ಕಾರ್ಯ ವೈದ್ಯರು ಮಾಡುತ್ತಿದ್ದಾರೆ. ಕ್ಯಾನ್ಸರ್ ಕುರಿತು ದೊಡ್ಡ ಪ್ರಮಾಣದಲ್ಲಿ ಅರಿವು ಹಾಗೂ ತಪಾಸಣಾ ಶಿಬಿರ ಆಯೋಜಿಸಿದರೆ ಅದಕ್ಕೆ ಅವ್ವ ಸೇವಾ ಟ್ರಸ್ಟ್‌ನಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಎನ್‌ಎಂಆರ್ ಕ್ಯಾನ್ಸರ್ ಸೆಂಟರ್‌ನ ನಿರ್ದೇಶಕ ಡಾ| ರವಿ ಕಲಘಟಗಿ ಮಾತನಾಡಿ, ಜನವರಿಯಲ್ಲಿ ಕೇಂದ್ರದಿಂದ ಗರ್ಭಕೋಶ ಮತ್ತು ಬಾಯಿ ಕ್ಯಾನ್ಸರ್ ಕುರಿತು ಶಿಬಿರ ನಡೆಸಲು ಯೋಜಿಸಲಾಗಿದೆ. ಜೊತೆಗೆ ತಿಂಗಳಿಗೊಮ್ಮೆ ಶಿಬಿರ ಹಮ್ಮಿಕೊಳ್ಳಲು ಆಲೋಚಿಸಲಾಗಿದೆ. ಶಾಲೆ-ಕಾಲೇಜುಗಳಲ್ಲಿ ತಿಂಗಳಿಗೆ ಒಂದು ತಾಸು ತಜ್ಞ ವೈದ್ಯರಿಂದ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯ ಮಾಡಿದರೆ ಯುವ ಜನಾಂಗಕ್ಕೆ ಉಪಯುಕ್ತವಾಗುತ್ತದೆ ಎಂದರು.
ಡಾ| ಲೇಪಾಕ್ಷಿ ಕೆ. ಮಾತನಾಡಿ, ತಂತ್ರಜ್ಞಾನ ಎಷ್ಟೇ ಸುಧಾರಿಸಿದ್ದರೂ ಕ್ಯಾನ್ಸರ್ ರೋಗಿಗಳ ಸಾವು ಕಡಿಮೆ ಆಗುತ್ತಿಲ್ಲ. ರೋಗವು 4 ಇಲ್ಲವೇ 5ನೇ ಹಂತಕ್ಕೆ ಬಂದಾಗ ಆಸ್ಪತ್ರೆಗೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಜೀವ ಉಳಿಸುವುದು ಬಹಳ ಕಷ್ಟ. ಮೊದಲ ಹಂತದಲ್ಲೇ ರೋಗ ಪತ್ತೆ ಮಾಡಿದರೆ ಅದನ್ನು ಗುಣಪಡಿಸುವುದು ಬಹಳ ಸುಲಭ. ರೋಗ ತಡೆಗಟ್ಟುವ ಕುರಿತು ವೈದ್ಯರು ನೀಡುವ ಸಲಹೆಗಳನ್ನು ಚಾಚುತಪ್ಪದೆ ಪಾಲಿಸಿದರೆ ಶೇ. 70 ರೋಗ ತಡೆಗಟ್ಟಬಹುದು. ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಕಡಿಮೆ ಇದ್ದರು ಸಾವಿನ ಪ್ರಮಾಣ ಹೆಚ್ಚಿದೆ. ಇದಕ್ಕೆ ಜನರಲ್ಲಿ ತಿಳಿವಳಿಕೆ ಇಲ್ಲದಿರುವುದೇ ಕಾರಣ. ಆದ್ದರಿಂದ ರೋಗದ ಕುರಿತು 3 ತಿಂಗಳಿಗೊಮ್ಮೆ ತಿಳಿವಳಿಕಾ ಶಿಬಿರ ಆಯೋಜಿಸಿದರೆ ಉತ್ತಮ ಎಂದರು.
ಲಯನ್ಸ್ ಕ್ಲಬ್ ಹುಬ್ಬಳ್ಳಿ ಪರಿವಾರದ ಅಧ್ಯಕ್ಷ ಶಶಿ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಂಆರ್ ಸಂಸ್ಥೆಯ ಗ್ರಂಥಶಾಸ್ತ್ರದ ಸಲಹೆಗಾರ ಮುಖ್ಯಸ್ಥ ಡಾ| ಶರಣ ಶೆಟ್ಟಿ, ಡಾ| ಪ್ರಸಾದ ಗುಣಾರಿ, ಡಾ| ಜಯಕಿಶನ ಅಗಿವಾಲಾ ಮೊದಲಾದವರಿದ್ದರು. ಮಹೇಂದ್ರ ಸಿಂಘಿ ವಂದಿಸಿದರು.