ಕಲಬುರಗಿ: ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಇಂಡಿಯನ್ ಕ್ಯಾನ್ಸ್‌ರ್ ಸೊಸೈಟಿ ಮತ್ತು ವಿಟಿಎಸ್‌ಎಂ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ಕ್ಯಾನ್ಸರ್ ಕುರಿತು ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಜಗತ್ ವೃತ್ತದಿಂದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳನ್ನೊಳಗೊಂಡ ಜಾಗೃತಿ ಜಾಥಾ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ನಡೆಯಿತು. ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಂಶಗಳು, ದುಷ್ಪರಿಣಾಮ ಹಾಗೂ ತಡೆಗಟ್ಟುವ ವಿಷಯದ ಭಿತ್ತಿ ಚಿತ್ರಗಳು, ಬರಹಗಳ ಫಲಕ ಹಿಡಿದು ಘೋಷಣೆ ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸಿದರು.
ಇಂಡಿಯನ್ ಕ್ಯಾನ್ಸರ್ ಸೊಸೈಟಿ ಯೋಜನಾ ಮತ್ತು ನಿರ್ವಹಣೆ ಅಧಿಕಾರಿ ಗುರುರಾಜ ಕುಲಕರ್ಣಿ ಜಾಥಾಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ‘ಐ ಆಮ್ ಆ್ಯಂಡ್ ಐ ವಿಲ್’ ಎಂದು ಘೋಷ ವಾಕ್ಯದೊಂದಿಗೆ ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತಿದೆ. ‘ಐ ಆಮ್ ಆ್ಯಂಡ್ ಐ ವಿಲ್’ ಎಂದರೆ ಕ್ಯಾನ್ಸರ್ ರೋಗಕ್ಕೆ ತುತ್ತಾದ ರೋಗಗಳಿಂದಲೇ ‘ನಾನು ನನ್ನಿಂದಲೇ ಕ್ಯಾನ್ಸರ್ ರೋಗ ನಿಲ್ಲಬೇಕು’ ಎಂದು ಹೇಳಿಸುವುದಾಗಿ ಎಂದು ಹೇಳಿದರು.
ಕ್ಯಾನ್ಸರ್‌ನಿಂದ ಸಾವನ್ನಪ್ಪುವರರ ಸಂಖ್ಯೆ ಹೆಚ್ಚುತ್ತಿದೆ. ಬಹುಪಾಲು ಸಾವುಗಳು ಕ್ಯಾನ್ಸರ್ ಕುರಿತ ಸರಿಯಾದ ಅರಿವು ಇಲ್ಲದಿರುವುದರಿಂದ ಸಂಭವಿಸುತ್ತಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ರೋಗ ತಡೆಗಟ್ಟಬಹುದಾಗಿದೆ. ಧೂಮಪಾನ, ತಂಬಾಕು ಸೇವನೆ ಮುಂತಾದ ದುಶ್ಚಟಗಳಿಂದ ದೂರ ಉಳಿಯಬೇಕು ಎನ್ನುವ ಕುರಿತು ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಶರಣಬಸವೇಶ್ವರ ವಾಣಿಜ್ಯ ಕಾಲೇಜು, ಗೋದುತಾಯಿ ಮಹಿಳಾ ಮಹಾವಿದ್ಯಾಲಯ, ಎಂಎಸ್‌ಐ ಪದವಿ ಕಾಲೇಜು, ಸರ್ಕಾರಿ ನರ್ಸಿಂಗ್ ಕಾಲೇಜು, ಸರ್ಕಾರಿ ಪದವಿ ಮಹಾವಿದ್ಯಾಲಯ, ವೀರಮ್ಮ ಗಂಗಸಿರಿ ಮಹಿಳಾ ಮಹಾವಿದಾ ಲಯ, ಕೃಷಿ ವಿಜ್ಞಾನ ಕೇಂದ್ರ, ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ವಿಟಿಎಸ್‌ಎಂ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ| ಗುರುರಾಜ ದೇಶಪಾಂಡೆ, ಮಹೇಶ ಪಾಟೀಲ, ಪ್ರಾಧ್ಯಾಪಕಿ ಶಾಂತಾ ಭೀಮಸೇನರಾವ, ಪ್ರವೀಣ ಹರನೂರ, ಶೈಲೇಶ ಶಾಸ್ತ್ರಿ, ಸದಾನಂದ ಪಾಟೀಲ, ದಿಗಂಬರ ಕುಲಕರ್ಣಿ ಇದ್ದರು.