Advertisement

ಕ್ಯಾನ್ಸರ್‌ಗೆ ಆತ್ಮವಿಶ್ವಾಸವೇ ಮದ್ದು

11:47 AM Nov 04, 2018 | |

ಬೆಂಗಳೂರು: “ಕ್ಯಾನ್ಸರ್‌ಗೆ ಆತ್ಮವಿಶ್ವಾಸವೇ ಮದ್ದಾಗಿದ್ದು, ನಾನು ಮತ್ತು ನನ್ನ ಪತ್ನಿ ಕ್ಯಾನ್ಸರ್‌ ಎದುರಿಸಿದ ರೀತಿಯನ್ನು “ಕ್ಯಾನ್ಸರ್‌ ವಾರ್ಡಿಲೆ ಚಿರಿ’ ಪುಸ್ತಕದಲ್ಲಿ ಹಂಚಿಕೊಳ್ಳುವ ಮೂಲಕ ರೋಗಿಗಳಿಗೆ ಧೈರ್ಯ ತುಂಬವ ಪ್ರಯತ್ನ ಮಾಡಿದ್ದೇನೆ’ ಎಂದು ಮಲಯಾಳಂನ ಖ್ಯಾತ ಹಾಸ್ಯನಟ, ಸಂಸದ ಇನ್ನಸೆಂಟ್‌ ತಿಳಿಸಿದರು.

Advertisement

ಸ್ನೇಹ ಬುಕ್‌ ಹೌಸ್‌ ವತಿಯಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಮಾಯಾ ಬಿ. ನಾಯರ್‌ ಅವರು ಅನುವಾದಿಸಿರುವ ಹಾಸ್ಯನಟ ಇನ್ನಸೆಂಟ್‌ ಅವರ “ಕ್ಯಾನ್ಸರ್‌ ವಾರ್ಡಿಲೆ ಚಿರಿ’ ಕೃತಿಯ ಕನ್ನಡ ಅನುವಾದ “ಸಾವಿನ ಮನೆಯ ಕದವ ತಟ್ಟಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನಗೆ ಕ್ಯಾನ್ಸರ್‌ ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ನನ್ನ ಪತ್ನಿಗೂ ಕ್ಯಾನ್ಸರ್‌ ಆಗಿತ್ತು.

ತಮ್ಮ ಪತ್ನಿಗೂ ಕ್ಯಾನ್ಸರ್‌ ರೋಗ ಕಾಣಿಸಿಕೊಂಡಾಲೂ ಎದೆಗುಂದದೆ ಧೈರ್ಯದಿಂದ ಜೀವನ ಸಾಗಿಸಿದೆವು. ಆತ್ಮವಿಶ್ವಾಸವೇ ಈ ರೋಗಕ್ಕೆ ಮದ್ದು, ಈ ಹಿನ್ನೆಲೆಯಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಉಪಯುಕ್ತವಾಗಲು ನಾನು ರೋಗವನ್ನು ಎದುರಿಸಿದ ರೀತಿಯನ್ನು ಅಕ್ಷರಕ್ಕೆ ಇಳಿಸಿದ್ದೇನೆ. ಭಾರತದ ನಾನಾ ಭಾಷೆಗೂ ಈ ಪುಸ್ತಕ ಅನುವಾದವಾಗಿದೆ,’ ಎಂದು ತಿಳಿಸಿದರು.

“ನನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೂ ಕ್ಯಾನ್ಸರ್‌ ಆಗಿತ್ತು. ನಂತರ ನನ್ನ ಪುಸ್ತಕವನ್ನು ಹಿಂದಿ, ಇಂಗ್ಲಿಷ್‌ಗೆ ಅನುವಾದ ಮಾಡಲು ಕೆಲವರು ಮುಂದೆ ಬಂದಿದ್ದರು. ಕನ್ನಡದ ಅನುವಾದಕರಿಗೆ ಈ ವಿಷಯವನ್ನು ತಿಳಿಸಿಯೇ ಅನುವಾದಕ್ಕೆ ಒಪ್ಪಿಗೆ ನೀಡಿರುವುದಾಗಿ ತಮ್ಮ ನಗೆಭರಿತ ಶೈಲಿಯಲ್ಲಿ ವಿವರಿಸಿದರು.

ಕೇವಲ 8ನೇ ತರಗತಿವರೆಗೆ ಶಿಕ್ಷಣ ಪಡೆದು ಮುಂದೆ ನನ್ನ ಸಹೋದರ ತಾನು ನಡೆಸುತ್ತಿರುವ ಕಾರ್ಖಾನೆಯ ಜವಾಬ್ದಾರಿ ವಹಿಸಿಕೊಳ್ಳಲು ತಿಳಿಸಿದ, ಆದರೆ ಅದನ್ನು ನಿರಾಕರಿಸಿ ಚಿತ್ರರಂಗಕ್ಕೆ ಬಂದೆ. 600 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ ಅದು ತೃಪ್ತಿ ನೀಡಿದೆ ಎಂದು ಹೇಳಿದರು.

Advertisement

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಲೀಲಾದೇವಿ ಆರ್‌. ಪ್ರಸಾದ್‌, ಇನ್ನಸೆಂಟ್‌ ಅವರು ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾಗ ಸದಾ ನಗುಮುಖದಲ್ಲೇ ಇರುತ್ತಿದ್ದರು. ಸಾವಿನ ಮನೆಯಲ್ಲಿ ಯಾರೂ ನಗಲ್ಲ. ರೋಗ ಎದುರಿಸಿದ ನೈಜ ಘಟನೆಗಳನ್ನು ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.

ಕ್ಯಾನ್ಸರ್‌ ರೋಗವಿದ್ದರೆ ಯಾರೂ ಅದನ್ನು ಹೇಳಿಕೊಳ್ಳುವುದಿಲ್ಲ. ಅಂತಹದರಲ್ಲಿ ಇನ್ನಸೆಂಟ್‌ ಅವರು ನಮ್ಮದು ಕ್ಯಾನ್ಸರ್‌ ಸಂತೃಷ್ಟವಾದ ಕುಟುಂಬ ಎಂದಿದ್ದಾರೆ. ಅಸಮಧಾನವಿದ್ದರೆ ನಗು ಬರುವುದಿಲ್ಲ. ಮನಸ್ಸಿನಲ್ಲಿ ನಿಷ್ಕಲ್ಮಷ ಭಾವನೆಯಿದ್ದರೆ ನಗು ಸಾಧ್ಯ ಎಂದು ಹೇಳಿದರು.

ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಇನ್ನಸೆಂಟ್‌ ಅವರದ್ದು ಇನೋಸೆಂಟ್‌ ವ್ಯಕ್ತಿತ್ವ. ರೋಗ, ದುಃಖ, ದುಗುಡ ಬಂದರೆ ಸವಾಲಾಗಿ ಸ್ವೀಕರಿಸಿ, ಕಷ್ಟವನ್ನು ಮೆಟ್ಟಿನಿಲ್ಲುವುದನ್ನು ಈ ಪುಸ್ತಕ ಜನತೆಗೆ ತಿಳಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿಜ್ಞಾನ ಬರಹಗಾರ ಸುಧೀಂದ್ರ ಹಾಲೊಡ್ಡೇರಿ, ದೂರದರ್ಶನದ ಉಪನಿರ್ದೇಶಕಿ ನಿರ್ಮಲಾ ಎಲಿಗಾರ್‌, ಸ್ನೇಹ ಬುಕ್‌ ಹೌಸ್‌ನ ಕೆ.ಬಿ. ಪರಶಿವಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next