Advertisement

ಪ್ರೀತಿಯ ಪ್ರಜ್ವಲ ಛಾಯೆಗೆ ಕ್ಯಾನ್ಸರ್‌ ಕೂಡ ಕರಗಿತು!

12:17 PM Feb 04, 2018 | |

ಬೆಂಗಳೂರು: ಡಿಜಿಟಲ್‌ ಯುಗದಲ್ಲಿ ಪ್ರೀತಿಗೆ ಯುವ ಮನಸ್ಸುಗಳು ಕೊಟ್ಟಿರುವ ವ್ಯಾಖ್ಯಾನ “ಜಸ್ಟ್‌ ಅಟ್ರಾಕ್ಷನ್‌’. ಆದರೆ ಬರೀ ಆಕರ್ಷಣೆಯೇ ಪ್ರೀತಿಯಾಗಿರುವ ಈ ದಿನಗಳಲ್ಲೂ ನಿಜ ಪ್ರೇಮಿಗಳಿದ್ದಾರೆ. ಪ್ರೀತಿ ಎಂದರೆ ಬರೀ ಆಕರ್ಷಣೆಯಲ್ಲ, ಅದೊಂದು ಭಾವನೆಗಳ ಗಟ್ಟಿ ಬಂಧ ಎಂಬುದನ್ನು ಸಾಬೀತು ಮಾಡಿದ ಉದಾಹರಣೆಯಿದು.

Advertisement

ಪ್ರಜ್ವಲ್‌ ಮತ್ತು ಛಾಯಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ವಿವಾಹಕ್ಕೆ ವಿರೋಧಿಸಿದ ಮನೆಯವರ ಮನವೊಲಿಸಿದ್ದರು. ಕಳೆದ ವರ್ಷ ಏ.15ರಂದು ನಿಶ್ಚಿತಾರ್ತವೂ ಆಗಿತ್ತು. ಆನಂತರ ಛಾಯಾಗೆ ಕ್ಯಾನ್ಸರ್‌ ಇರುವುದು ಗೊತ್ತಾಗಿದೆ. ಇದರಿಂದ ಧೃತಿಗೆಡದ ಪ್ರಜ್ವಲ್‌, ಛಾಯಾ ವರನ್ನು ಮದುವೆಯಾಗುವ ನಿರ್ಧಾರಕ್ಕೆ ಬದ್ಧರಾಗಿದ್ದಾರೆ.

ಅದರಂತೆ ಮನೆಯವರನ್ನೂ ಒಪ್ಪಿಸಿ ಆಕೆಯೊಂದಿಗೆ ಜೀವನ ನಡೆಸಲು ಮುಂದಾಗಿದ್ದಾರೆ. ಇದು ತುರುವೇಕೆರೆ ತಾಲೂಕಿನ ಜಡೆ ಮಾಯಸಂದ್ರ ಗ್ರಾಮದ ಪ್ರಜ್ವಲ್‌, ಬೆಂಗಳೂರಿನ ಮಂಜುನಾಥ ನಗರದ ಛಾಯಾ ಅವರು, ಕ್ಯಾನ್ಸರ್‌ನಂಥ ಕ್ಯಾನ್ಸರನ್ನೇ ಕಂಗೆಡಿಸಿ ಗೆದ್ದ “ಪ್ರೀತಿಯ ಕಥೆ’.

ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ನಾರಾಯಣ ಹೆಲ್ತ್‌ ಸಿಟಿ ವತಿಯಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕ್ಯಾನ್ಸರ್‌ ರೋಗಿಗಳೊಂದಿನ ಸಂವಾದ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗದ ಕ್ಯಾನ್ಸರ್‌ ರೋಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ಪ್ರಜ್ವಲ್‌ ಮತ್ತು ಛಾಯಾರ ಲವ್‌ ಸ್ಟೋರಿ ಕೇಳಿದವರ ಕಣ್ಣಾಲಿಗಳು ತೇವವಾಗಿದ್ದು ಸುಳ್ಳಲ್ಲ.

ಪ್ರಜ್ವಲ್‌-ಛಾಯಾ ಪ್ರೇಮ ವಿವಾಹಕ್ಕೆ ಕುಟುಂಬದವರು ವಿರೋಧಿಸಿದ್ದರು. ಈ ವಿರೋಧವನ್ನು ಸಮರ್ಥವಾಗಿ ನಿಭಾಯಿಸಿದ ಅವರಿಬ್ಬರೂ, ಮನೆಯವರ ಮನವೊಲಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. “ಆದರೆ, ಅದೊಂದು ದಿನ ಛಾಯಾ ಇದ್ದಕ್ಕಿದ್ದಂತೆ ಕುಸಿದುಬಿದ್ದಳು.

Advertisement

ಕೂಡಲೇ ಆಸ್ಪತ್ರೆಗೆ ದಾಖಲಿಸಿ ಸ್ಕ್ಯಾನ್‌ ಮಾಡಿಸಿದಾಗ ಆಕೆ ಮೆದುಳಿನಲ್ಲಿ ಕ್ಯಾನ್ಸರ್‌ ಗಡ್ಡೆ ಇರುವುದು ಗೊತ್ತಾಗಿ, ಒಮ್ಮೆಗೆ ಸಿಡಿಲು ಬಡಿದ ಅನುಭವವಾಯ್ತು. ಆದರೂ, ಧೈರ್ಯಗೆಡದೆ, ಸಕಾರಾತ್ಮಕ ಮನಸ್ಸಿನಿಂದ ಚಿಕಿತ್ಸೆಗೆ ಮುಂದಾದೆವು. ಹಲವು ತಿಂಗಳ ನಿರಂತರ ಚಿಕಿತ್ಸೆ ನಂತರ ನನ್ನ ಛಾಯಾ ಈಗ ಬಹುತೇಕ ಗುಣಮುಖಳಾಗಿದ್ದಾಳೆ,’ ಎಂದು ಪ್ರಜ್ವಲ್‌ ವಿವರಿಸಿದರು.

ನಾರಾಯಣ ಹೆಲ್ತ್‌ ಸಿಟಿಯ ಡಾ. ಶರತ್‌ ದಾಮೋದರ್‌ ಮಾತನಾಡಿ, ಕ್ಯಾನ್ಸರ್‌ ಗುಣಪಡಿಸಲಾಗದ ಕಾಯಿಲೆ ಎಂಬ ಮಾನಸ್ಥಿತಿ ಇಂದಿಗೂ ಜನ ಸಾಮಾನ್ಯರಲ್ಲಿದೆ. ಆದ್ದರಿಂದಲೇ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ, ಈಗ ಕ್ಯಾನ್ಸರನ್ನು ಸಮರ್ಥವಾಗಿ ಎದುರಿಸಿದ ಸಾಧಕರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಕುರಿತು ಮಾತನಾಡಿದ ನಾರಾಯಣ ಹೆಲ್ತ್‌ ಸಿಟಿಯ ಡಾ. ಸುನಿಲ್‌ ಭಟ್‌, ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಕ್ಯಾನ್ಸರ್‌ ಪ್ರಕರಣಗಳಲ್ಲಿ ಚೇತರಿಸಿಕೊಂಡವರ ಪ್ರಮಾಣ ಶೇ.30ರಿಂದ 40ರಷ್ಟಿದೆ ಎಂದು ಹೇಳಿದರು. ನಟಿ ಹರ್ಷಿಕಾ ಪೂಣಚ್ಚ ಸಮಗ್ರ ಕ್ಯಾನ್ಸರ್‌ ತಪಾಸಣಾ ಪ್ಯಾಕೇಜ್‌ಗೆ ಚಾಲನೆ ನೀಡಿದರು.

ಬ್ಲಿಡ್‌ ಕ್ಯಾನ್ಸರ್‌, ಲಂಗ್‌ ಕ್ಯಾನ್ಸರ್‌, ಬ್ರೈನ್‌ ಟ್ಯೂಮರ್‌ ಸೇರಿ ವಿವಿಧ ಬಗೆಯ ಕ್ಯಾನ್ಸರ್‌ ರೋಗಗಳನ್ನು ಧೈರ್ಯವಾಗಿ ಎದುರಿಸಿ, ನಿಯಮಿತ ಚಿಕಿತ್ಸೆ ಪಡೆಯುವ ಮೂಲಕ ಗುಣ ಹೊಂದುತ್ತಿರುವವರನ್ನು ಈ ವೇಳೆ ಗೌರವಿಸಲಾಯಿತು. ಅವರಿಗಾಗಿ ಸಂಗೀತ, ಚಿತ್ರಕಲೆ, ರಸಪ್ರಶ್ನೆ ಮೊದಲಾದ ಮನೋರಂಜನಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರೋಗಿಗಳು ತಮಗಾದ ಕಾಯಿಲೆ ಹಾಗೂ ಚಿಕಿತ್ಸೆ ಮೂಲಕ ಚೇತರಿಸಿಕೊಂಡ ಅನುಭವ ಹಂಚಿಕೊಂಡರು.   

ನಿಯಮಿತ ಚಿಕಿತ್ಸೆ, ಮಾನಸಿಕ ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದವರೇ ನಿಜವಾದ ಸಾಧಕರು. ಇಂಥ ಸಾಧಕರ ಕಥೆಗಳು, ಕ್ಯಾನ್ಸರ್‌ ಕುರಿತು ನಕಾರಾತ್ಮಕ ಭಾವನೆ ಹೊಂದಿರುವವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲಿವೆ. 
-ಹರ್ಷಿಕಾ ಪೊಣಚ್ಚ, ನಟಿ

Advertisement

Udayavani is now on Telegram. Click here to join our channel and stay updated with the latest news.

Next