ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲ್ಪಡುವ ಪ್ರಮುಖ ನಾಲ್ಕು ಔಷಧಗಳು, ಪ್ರತಿಜೀವಕಗಳು ಮತ್ತು ಕೆಲವೊಂದು ಸೋಂಕು ನಿವಾರಕ ಔಷಧಗಳನ್ನು ಕೇಂದ್ರ ಸರಕಾರ ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಗೆ ಸೇರ್ಪಡೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ. ಕೇಂದ್ರ ಸರಕಾರದ ಈ ಮಹತ್ವದ ನಿರ್ಧಾರ ಕ್ಯಾನ್ಸರ್ ರೋಗಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು ಕ್ಯಾನ್ಸರ್ ನಿಯಂತ್ರಣ ಔಷಧಗಳ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.
ಎಲ್ಲರಿಗೂ ಅಗ್ಗದ ಬೆಲೆಯಲ್ಲಿ ಔಷಧವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ದಿಟ್ಟ ಹೆಜ್ಜೆಯನ್ನಿರಿಸಿದ್ದು, 34 ಔಷಧಗಳನ್ನು ಹೊಸದಾಗಿ ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಇದರಿಂದ ಈ ಎಲ್ಲ ಔಷಧಗಳ ಬೆಲೆ ಭಾರೀ ಇಳಿಕೆಯನ್ನು ಕಾಣಲಿದ್ದು, ರೋಗಿಗಳಿಗೆ ಕೈಗೆಟಕುವ ಬೆಲೆಯಲ್ಲಿ ಈ ಔಷಧಗಳು ಲಭಿಸಲಿವೆ. ಕ್ಯಾನ್ಸರ್‌ನಂತಹ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲ್ಪಡುವ ಔಷಧಗಳ ಬೆಲೆ ಬಹಳಷ್ಟು ಹೆಚ್ಚಿರುವುದರಿಂದ ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಪಡೆಯುವುದೇ ಕಷ್ಟಸಾಧ್ಯವಾಗಿತ್ತು.
ಈಗ ಕೇಂದ್ರ ಸರಕಾರ ವಿವಿಧ ತೆರನಾದ ಕ್ಯಾನ್ಸರ್‌ನ ಚಿಕಿತ್ಸೆಯಲ್ಲಿ ಬಳಸಲ್ಪಡುವ 4 ಪ್ರಮುಖ ಔಷಧಗಳಾದ ಬೆಂಡಾಮಸ್ಟಿನ್ ಹೈಡ್ರೋಕ್ಲೋರೈಡ್, ಇರಿನೊಟೆಕನ್ ಎಚ್‌ಸಿಐ ಟ್ರೈಹೈಡ್ರೇಟ್, ಲೆನಾಲಿಡೊಮೈಡ್ ಮತ್ತು ಲ್ಯುಪ್ರೊಲೈಡ್ ಅಸಿಟೇಟ್ ಔಷಧಗಳು, ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲ್ಪಡುವ ಔಷಧಗಳನ್ನು ಅಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ಈ ಔಷಧಗಳ ಬೆಲೆಯ ಮೇಲೆ ನಿಯಂತ್ರಣ ಹೇರಿದೆ. ಇದರ ಜತೆಯಲ್ಲಿ ಸೋಂಕು ನಿವಾರಕಗಳಾದ ಐವರ್‌ವೆುಕ್ಟಿನ್, ಮುಪಿರೋಸಿನ್ ಮತ್ತು ಮೆರೊಪೆನೆಮ್ ಔಷಧವನ್ನೂ ಈ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಹಲವಾರು ಪ್ರತಿಜೀವಕಗಳು, ಲಸಿಕೆಗಳನ್ನು ಕೂಡ ಪಟ್ಟಿಗೆ ಸೇರಿಸಲಾಗಿದೆ.
ಈಗ ಒಟ್ಟಾರೆ ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ 27 ವಿಭಾಗಗಳ 384 ಔಷಧಗಳು ಸೇರಿವೆ. ಅಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆಯಾಗಿರುವ ಔಷಧಗಳು ಗ್ರಾಹಕರಿಗೆ ನಿರ್ದಿಷ್ಟ ಬೆಲೆಯಲ್ಲಿ ಲಭ್ಯವಾಗಲಿವೆ.
ಇದೇ ವೇಳೆ ಕೇಂದ್ರ ಸರಕಾರ ರ್ಯಾನಿಟಿಡಿನ್, ಸುಕ್ರಾಲ್ಫೆàಟ್, ವೈಟ್ ಪೆಟ್ರೋಲಿಯಂ, ಅಟೆನೊಲಾಲ್ ಮತ್ತು ಮೀಥೈಲ್ಡೋಪಾ ಸಹಿತ 26 ಔಷಧಗಳನ್ನು ಅಗತ್ಯ ಔಷಧಗಳ ಪಟ್ಟಿಯಿಂದ ಕೈಬಿಟ್ಟಿದೆ. ಈ ಔಷಧಗಳ ಉತ್ಪಾದನೆ ವೆಚ್ಚದಾಯಕವಾಗಿರುವುದು ಮತ್ತು ಇದಕ್ಕಿಂತ ಉತ್ತಮ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಇವುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಔಷಧಗಳ ಬೆಲೆಯ ಮೇಲೆ ನಿಯಂತ್ರಣದ ಜತೆಯಲ್ಲಿ ಗುಣಮಟ್ಟ ಮತ್ತು ಮಾರುಕಟ್ಟೆಯಲ್ಲಿ ಇವುಗಳ ಲಭ್ಯತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಈ ಪ್ರಮುಖ ಔಷಧಗಳನ್ನು ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇದರಿಂದ ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಸಮರ್ಪಕ ಮತ್ತು ಗುಣಮಟ್ಟದ ಚಿಕಿತ್ಸೆ ಲಭಿಸುವುದನ್ನು ಸರಕಾರ ಖಾತರಿಪಡಿಸಿದೆ.
ಕೊರೊನಾನಂತರ ದೇಶದ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ಜನರ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಆರೋಗ್ಯ ಮೂಲಸೌಕರ್ಯ, ಔಷಧಗಳ ಉತ್ಪಾದನೆ, ಲಭ್ಯತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದೆ. ಇದೀಗ ಔಷಧಗಳ ಬೆಲೆ ಮತ್ತು ಲಭ್ಯತೆ ವಿಚಾರದಲ್ಲೂ ಸರಕಾರ ಒಂದಿಷ್ಟು ಬಿಗು ನಿಲುವು ತಾಳುವ ಮೂಲಕ ದೇಶದ ಕಟ್ಟಕಡೆಯ ಪ್ರಜೆಗೂ ಆರೋಗ್ಯ ಸೇವೆ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.