Advertisement

ಮಿತಿ ಮೀರಿದರೆ ವಾಹನ ಪರವಾನಿಗೆ ರದ್ದು

11:13 PM Jul 25, 2019 | mahesh |

ಸುಳ್ಯ: ಖಾಸಗಿ ವಾಹನಗಳಲ್ಲಿ ಮಿತಿಗಿಂತ ಹೆಚ್ಚಾಗಿ ಶಾಲಾ ಮಕ್ಕಳನ್ನು ಕೊಂಡೊಯ್ಯುವುದು ಕಂಡುಬಂದಲ್ಲಿ ಅಂತಹ ವಾಹನಗಳ ಪರವಾನಿಗೆ ರದ್ದು ಗೊಳಿಸಲಾಗುವುದು ಎಂದು ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌ ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಸುಳ್ಯ ತಾ.ಪಂ. ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಎಸ್‌ಡಿಎಂಸಿ, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಮುಖ್ಯಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಒಂದು ತಿಂಗಳಿನಿಂದ ಶಾಲಾ ಮಕ್ಕಳನ್ನು ಕೊಂಡೊಯ್ಯುವ ರಿಕ್ಷಾ ಸಹಿತ ವಿವಿಧ ಖಾಸಗಿ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ನಿಯಮ ಮೀರಿ ರುವ ಪ್ರಕರಣಗಳಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಶಾಲಾ ಆಡಳಿತ ಮಂಡಳಿ ಹೊಣೆ
ತಾಲೂಕಿನ ಖಾಸಗಿ ಶಾಲೆಗಳಿಗೆ ಈ ಬಗ್ಗೆ ನೋಟಿಸ್‌ ನೀಡಿದ್ದೇವೆ. ಆ ಶಾಲೆಗಳಿಗೆ ಮಕ್ಕಳು ಯಾವ ವಾಹನದಲ್ಲಿ ಬರುತ್ತಾರೆ ಎನ್ನುವ ವಿಚಾರ ಆಡಳಿತ ಮಂಡಳಿ ಬಳಿ ಲಭ್ಯ ಇರಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಶಾಲಾ ಆಡಳಿತ ಮಂಡಳಿ ಜವಾಬ್ದಾರಿ ಹೊಂದಿದೆ. ಆಯಾ ಖಾಸಗಿ ಶಾಲೆಗಳು ತತ್‌ಕ್ಷಣ ಪೋಷಕರ ಸಭೆ ಕರೆದು ಕೂಡಲೇ ಮಾಹಿತಿ ನೀಡಬೇಕು ಎಂದು ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌ ಸೂಚನೆ ನೀಡಿದರು.

ಸ್ವಾರ್ಥಕ್ಕಾಗಿ ಮಕ್ಕಳ ಭವಿಷ್ಯ ಹಾಳು ಮಾಡುವುದು ಬೇಡ. ಮಕ್ಕಳನ್ನು ಕರೆದೊಯ್ಯುವ ವಾಹನ ಚಾಲಕ – ಮಾಲಕರನ್ನು ಕರೆಯಿಸಿ ತಿಳಿ ಹೇಳಿ ಎಂದ ಅವರು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ಬಳಸಬಾರದು. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಗ್ರಾಮಾಂತರಕ್ಕೆ ಬಸ್‌ ಕೊರತೆ
ತಾಲೂಕಿನ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ ಕೊರತೆ ಉಂಟಾಗಿದೆ. ಬಸ್ಸಿನಲ್ಲಿ ಮಿತಿ ಮೀರಿ ಮಕ್ಕಳನ್ನು ತುಂಬಿಸಿಕೊಳ್ಳಬೇಕಾದ ಸ್ಥಿತಿ ಇದೆ. ಮಕ್ಕಳಿಗೆ ಅಗತ್ಯ ಇರುವೆಡೆ ಹೆಚ್ಚುವರಿ ಬಸ್‌ ಕಲ್ಪಿಸಬೇಕು ಎಂದು ಪಿ.ಎಸ್‌. ಗಂಗಾಧರ್‌, ತಾ.ಪಂ. ಸದಸ್ಯೆ ಜಾಹ್ನವಿ ಕಾಂಚೋಡು, ಸುದರ್ಶನ ಪಾತಿಕಲ್ಲು, ಶಿವರಾಮ ಕಣಿಲೆಗುಂಡಿ, ತಿರುಮಲೇಶ್ವರಿ ಒತ್ತಾಯಿಸಿದರು.

Advertisement

ನಗರದ ಹೊರವಲಯದ ಕೊಡಿ ಯಾಲಬೈಲು ಸರಕಾರಿ ಪದವಿ ಕಾಲೇಜಿ ನಿಂದ ಪೇಟೆಗೆ ವಿದ್ಯಾರ್ಥಿಗಳು ನಡೆದು ಕೊಂಡು ಬರುತ್ತಾರೆ. ಅಲ್ಲಿಗೆ ತತ್‌ಕ್ಷಣ ಬಸ್‌ ವ್ಯವಸ್ಥೆ ಮಾಡಬೇಕು ಎಂದು ಪಿ.ಎಸ್‌. ಗಂಗಾಧರ ಹೇಳಿದರು. ಇದಕ್ಕೆ ಉತ್ತರಿಸಿದ ಡಿಪೋ ವ್ಯವಸ್ಥಾಪಕ ಸುಂದರ್‌ರಾಜ್‌, ಮಕ್ಕಳಿಗೆ ತೊಂದರೆ ಆಗುವ ಕಡೆ ಹೆಚ್ಚುವರಿ ಬಸ್‌ ಓಡಿಸಲು ಪ್ರಯತ್ನಿಸಲಾಗುವುದು. ಹಲವು ಕಡೆ ಹೇಸ ರೂಟ್‌ಗಳ ಬಗ್ಗೆ ಸರ್ವೆ ನಡೆಸಿದ್ದೇವೆ. ಯಾವ ಪ್ರದೇಶಗಳಿಗೆ ಆವಶ್ಯಕತೆ ಇದೆ ಎನ್ನುವ ಬಗ್ಗೆ ಮೇಲಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಸುರಕ್ಷತೆ ಕಡೆಗೆ ವಿದ್ಯಾರ್ಥಿಗಳೂ ಗಮನ ಹರಿಸಬೇಕು. ಬಸ್‌ ಬಾಗಿಲಲ್ಲಿ ನಿಲ್ಲುವುದು ಮೊದಲಾದ ಸಮಸ್ಯೆಗಳು ಇವೆ. ಡೋರ್‌ ಲಾಕ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸುಂದರ್‌ ರಾಜ್‌ ಉತ್ತರಿಸಿದರು.

ತಾರತಮ್ಯ ಬೇಡ
ಶಿಕ್ಷಣಾಧಿಕಾರಿ ಮಹಾದೇವ ಮಾತನಾಡಿ, ಬಸ್‌ ಪಾಸ್‌ ಹೊಂದಿರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಸ್‌ ತೋರಿಸುವ ಸಂದರ್ಭ ವಿದ್ಯಾರ್ಥಿಗಳನ್ನು ತಾರತಮ್ಯ ನೆಲೆಯಲ್ಲಿ ನೋಡುವ ನಿರ್ವಾಹಕರು ಇದ್ದಾರೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡುವಂತೆ ಸೂಚಿಸಿದರು.

ಚಾಲಕ, ನಿರ್ವಾಹಕರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆದರೆ ತತ್‌ಕ್ಷಣ ನನಗೆ ದೂರು ನೀಡಿ. ಸುಳ್ಯ ವ್ಯಾಪ್ತಿಯ ಎಲ್ಲ ಬಸ್‌ ಚಾಲಕ ನಿರ್ವಾಹಕರಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಸುಂದರ್‌ ರಾಜ್‌ ಹೇಳಿದರು.

ವೇಗ ನಿಯಂತ್ರಕ ಅಳವಡಿಸಿ
ಸುಬ್ರಹ್ಮಣ್ಯ – ಜಾಲಸೂರು ಅಂತರಾಜ್ಯ ಸಂಪರ್ಕ ರಸ್ತೆಯ ಎಲಿಮಲೆ ಪೇಟೆಯಲ್ಲಿ 3 ಶಾಲೆಗಳ ವಿದ್ಯಾರ್ಥಿಗಳು ರಸ್ತೆ ದಾಟುತ್ತಾರೆ. ಶಾಲೆ ಬಿಟ್ಟ ಬಳಿಕ ರಸ್ತೆ ಬದಿ ನಿಂತಿರುತ್ತಾರೆ. ಈ ಸಂದರ್ಭ ವಾಹನ ಸವಾರರು ಅತಿ ವೇಗವಾಗಿ ಚಲಾಯಿಸಿ ಅಪಘಾತ ಸಂಭವಿಸಿದ ಘಟನೆಗಳು ನಡೆದಿವೆ. ಇಲ್ಲಿ ವೇಗ ನಿಯಂತ್ರಕ ಅಳವಡಿಸಬೇಕು ಎಂದು ಎಲಿಮಲೆ ಎಸ್‌ಡಿಎಂಸಿ ಅಧ್ಯಕ್ಷರು ಹೇಳಿದರು.

ಆವರಣಕ್ಕೆ ಪ್ರವೇಶ ಇಲ್ಲ
ಸೀತಾರಾಮ ಕಣಿಲೆಗುಂಡಿ ಮಾತನಾಡಿ, ಬೆಳ್ಳಾರೆ ಪಬ್ಲಿಕ್‌ ಸ್ಕೂಲ್‌ ಸುಣ್ಣ ಬಣ್ಣ ಬಳಿದು ಅಂದವಾಗಿದೆ. ಆದರೆ ಕಿಡಿಗೇಡಿಗಳು ಗೋಡೆಗಳಿಗೆ ಮಣ್ಣು ಎಸೆದು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ ಎಂದು ಹೇಳಿದರು.

ಶಾಲಾ ಆವರಣವನ್ನು ಹಳೆ ವಿದ್ಯಾರ್ಥಿಗಳು ಮತ್ತು ಇತರರು ಉಪಯೋಗಿಸಲು ಅವಕಾಶ ಇಲ್ಲ. ಶಾಲೆಗಳಲ್ಲಿ ಇತರ ಸಂಘಟನೆಗಳ ಕಾರ್ಯಕ್ರಮ ನಡೆಸಲು ಸರಕಾರದ ಅನುಮತಿ ಇಲ್ಲ. ಎಸ್‌ಡಿಎಂಸಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಶಿಕ್ಷಣಾಧಿಕಾರಿ ಹೇಳಿದರು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ, ಶಾಲಾ ಮೈದಾನಗಳನ್ನು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರರಿಗೆ ಆಟಕ್ಕೆ ಅವಕಾಶ ನೀಡಲು ಇಲ್ಲ ಎಂಬ ಆದೇಶ ಇದ್ದರೂ, ಹಳೆ ವಿದ್ಯಾರ್ಥಿಗಳಿಗೆ ಮಾನವೀಯ ದೃಷ್ಟಿಯಿಂದ ಆಟ ಆಡಲು ಕೊಟ್ಟಲ್ಲಿ ಶಾಲೆಯ ಸೊತ್ತುಗಳಿಗೆ ಹಾನಿ ಮಾಡಬಾರದು ಎಂದು ತಿಳಿ ಹೇಳುವಂತೆ ಸೂಚಿಸಿದರು.

ಕನ್ನಡ ಶಾಲೆಗಳನ್ನು ಉಳಿಸುವ ಆಂದೋಲನ ಬೆಂಗಳೂರಿನ ಐಟಿ ಬಿಟಿ ಉದ್ಯೋಗಿಗಳು ಸೇರಿ ಹಮ್ಮಿಕೊಂಡಿದ್ದಾರೆ. ಕೋಲ್ಚಾರ್‌ ಶಾಲೆಯನ್ನು ವರ್ಣಚಿತ್ರ ಮತ್ತು ಪೈಂಟಿಂಗ್‌ ಮೂಲಕ ಅಭಿವೃದ್ಧಿ ಪಡಿಸಿದ್ದಾರೆ. ಇದೇ ರೀತಿಯ ಕನ್ನಡ ಮನಸ್ಸುಗಳು ಸುಳ್ಯದಲ್ಲಿ ನಡೆಯಬೇಕು ಎಂದು ಸುದರ್ಶನ ಪಾತಿಕಲ್ಲು ಸಲಹೆ ನೀಡಿದರು.

ವೇದಿಕೆಯಲ್ಲಿ ಸುಳ್ಯ ಎಸ್‌.ಐ. ಹರೀಶ್‌ ಕುಮಾರ್‌, ಬೆಳ್ಳಾರೆ ಠಾಣಾ ಎಸ್‌.ಐ. ಈರಯ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯಗುರು, ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಹಿತಿ ನೀಡದೆ ಸಭೆ
ಶಾಲಾ ಸುರಕ್ಷತೆಯ ಬಗ್ಗೆ ಮಹತ್ವದ ಸಭೆಯಾಗಿದ್ದರೂ ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿರಲಿಲ್ಲ. ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾ.ಪಂ.ನಲ್ಲಿ ಈ ಸಭೆ ನಡೆದಿದ್ದರೂ ಎರಡು ಇಲಾಖೆಗಳು ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಈ ಹಿಂದೆ ಕೆಡಿಪಿ ಸಭೆ ಸಹಿತ ಹಲವು ಸಭೆಗಳಿಗೂ ತಾ.ಪಂ. ಕಚೇರಿ ಇದೇ ರೀತಿ ಮಾಡಿತ್ತು. ರಹಸ್ಯ ಸಭೆಗಳಿಗೆ ಒತ್ತು ನೀಡುತ್ತಿರುವ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತರ್ಜಲ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿ
ತಾಲೂಕಿನ ಎಲ್ಲ ಶಾಲೆಗಳಲ್ಲಿ ಜಲ ಸಂರಕ್ಷಣೆ ಮಾಹಿತಿಗಳನ್ನು ನೀಡಬೇಕು. ಅಂತರ್ಜಲ ಮಟ್ಟ ಹೆಚ್ಚಳದ ಆವಶ್ಯಕತೆ ಹಾಗೂ ಡೆಂಗ್ಯೂ ಸಹಿತ ಸಾಂಕ್ರಾಮಿಕ ಜ್ವರ ಬಗ್ಗೆ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡಬೇಕು ಎಂದು ಶಿಕ್ಷಣಾಧಿಕಾರಿ ಹೇಳಿದರು. ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ರೂಪಿಸಬೇಕು ಎಂದು ಎಸ್‌ಡಿಎಂಸಿ ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next