Advertisement

ರೈಲುಗಳ ರದ್ದು: ಹಿಂಪಾವತಿಗೆ ನಿಲ್ದಾಣಗಳಲ್ಲಿ ನೂಕುನುಗ್ಗಲು

12:58 AM Jun 04, 2023 | Team Udayavani |

ಬೆಂಗಳೂರು: ರೈಲು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಮಾರ್ಗ ಬದಲಾವಣೆ ಜತೆಗೆ ಹಲವು ರೈಲುಗಳ ಸೇವೆ ರದ್ದುಪಡಿಸಲಾಗಿದೆ. ಇದರ ಬೆನ್ನಲ್ಲೇ ಟಿಕೆಟ್‌ ಹಣ ವಾಪಸ್‌ ಪಡೆಯಲು ಸರ್‌ ಎಂ. ವಿಶ್ವೇಶ್ವರಯ್ಯ ಬೆಂಗಳೂರು ಟರ್ಮಿನಲ್‌ (ಎಸ್‌ಎಂವಿಬಿ)ನಲ್ಲಿ ಶನಿ
ವಾರ ನೂಕುನುಗ್ಗಲು ಉಂಟಾಯಿತು.

Advertisement

ಕಳೆದೆರಡು ದಿನಗಳು ಬೆಂಗಳೂರಿನಿಂದ ಹೋಗಬೇಕಾದ ನಾಲ್ಕು ರೈಲುಗಳ ಸೇವೆ ರದ್ದಾಗಿದ್ದರೆ, ಐದು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಲ್ಲಿ ಕೆಲವರು ಆನ್‌ಲೈನ್‌ ಮೂಲಕ ಟಿಕೆಟ್‌ಗಳನ್ನು ಬುಕಿಂಗ್‌ ಮಾಡಿಕೊಂಡಿದ್ದರೆ, ನೂರಾರು ಜನ ನೇರವಾಗಿ ನಿಲ್ದಾಣಕ್ಕೆ ಬಂದು ಹಣ ಪಾವತಿಸಿ ಟಿಕೆಟ್‌ ಖರೀದಿಸಿದವರಿದ್ದಾರೆ. ಅಲ್ಲದೆ, ಕಾಯ್ದಿರಿಸದ ಟಿಕೆಟ್‌ ಪಡೆದವರೂ ಇದ್ದಾರೆ. ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆದವರಿಗೆ ಆಯಾ ಖಾತೆಗೆ ಹಣ ಹಿಂಪಾವತಿ ಆಗುತ್ತಿದೆ. ಉಳಿದವರು ಶನಿವಾರ ನಿಲ್ದಾಣದ ಮುಂದೆ ಕಾದುಕುಳಿತಿರುವುದು ಕಂಡುಬಂತು.

ಬೆಳಿಗ್ಗೆಯಿಂದಲೇ ಜನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಕೌಂಟರ್‌ಗಳ ಮುಂದೆ ಮುಗಿಬಿದ್ದಿದ್ದರು. ಅದರಲ್ಲಿ ಬಹುತೇಕರು ಕಾರ್ಮಿಕ ವರ್ಗದವರಾಗಿದ್ದರು. ಒಂದೆಡೆ ಲಭ್ಯವಿರುವ ರೈಲುಗಳ ಪ್ರಯಾಣಿಕರಿಗೆ ಟಿಕೆಟ್‌ ವಿತರಣೆ ಮತ್ತೂಂದೆಡೆ ಏಕಕಾಲದಲ್ಲಿ ಜನ ಹಿಂಪಾವತಿಗಾಗಿ ಧಾವಿಸಿದ್ದರಿಂದ ನಿಲ್ದಾಣದಲ್ಲಿ ದಟ್ಟಣೆ ಉಂಟಾಯಿತು. ಇದನ್ನು ನಿಭಾಯಿಸಲು ರೈಲ್ವೆ ಸಿಬ್ಬಂದಿ ಹರಸಾಹಸ ಮಾಡಬೇಕಾಯಿತು.

ಈ ಮಧ್ಯೆ ಮಾರ್ಗ ಬದಲಾವಣೆ ಮಾಡಿರುವ ರೈಲುಗಳ ಪ್ರಯಾಣಿಕರಲ್ಲೂ ಕೆಲವರು ತಮ್ಮ ಪ್ರಯಾಣವನ್ನೇ ರದ್ದುಗೊಳಿಸಿ, ಹಣ ವಾಪಸ್‌ ನೀಡುವಂತೆ ಸರದಿಯಲ್ಲಿ ನಿಂತಿರುವುದು ಕಂಡುಬಂತು. ಇದರಿಂದ ತುಸು ಗೊಂದಲದ ವಾತಾವರಣ ಉಂಟಾಯಿತು. ಶನಿವಾರ ಸುಮಾರು ಸಾವಿರ ಜನ ಟರ್ಮಿನಲ್‌ನಲ್ಲಿ ಜಮಾಯಿಸಿದ್ದರು. ತಾಸುಗಟ್ಟಲೆ ಕಾದುಕುಳಿತು, ಹಣ ಪಡೆದು ಮನೆಗಳಿಗೆ ಹಿಂತಿರುಗಿದರು.

697 ಟಿಕೆಟ್‌ ರದ್ದು; 5.23 ಲಕ್ಷ ರೂ. ಹಿಂಪಾವತಿ
ಶುಕ್ರವಾರ ಎಸ್‌ಎಂವಿಬಿಯಿಂದ ಗುವಾಹಟಿ (ರೈಲು ಸಂಖ್ಯೆ 12509)ಗೆ ಹೊರಡಬೇಕಿದ್ದ ರೈಲು ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕ ಬುಕಿಂಗ್‌ ಆಗಿದ್ದ 345 ಪ್ರಯಾಣಿಕರ 170 ಟಿಕೆಟ್‌ಗಳನ್ನು ರದ್ದುಪಡಿಸಿ, 4.52 ಲಕ್ಷ ರೂ.ಗಳನ್ನು ಆಯಾ ಪ್ರಯಾಣಿಕರಿಗೆ ಹಿಂಪಾವತಿ ಮಾಡಲಾಗಿದೆ. ಅದೇ ರೀತಿ, 529 ಪ್ರಯಾಣಿಕರ 527 ಟಿಕೆಟ್‌ಗಳನ್ನು ರದ್ದುಗೊಳಿಸಿ 2.71 ಲಕ್ಷ ರೂ. ಆಯಾ ಪ್ರಯಾಣಿಕರಿಗೆ ನೀಡಲಾಗಿದೆ ಎಂದು ನೈರುತ್ಯ ರೈಲ್ವೇ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next