ಬೀದರ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಕ್ಲಿನಿಕ್‌ಗಳು ಮುಚ್ಚಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಎಲ್ಲ ಖಾಸಗಿ ಕ್ಲಿನಿಕ್‌ಗಳು ತೆರೆದು ಸಾಮಾನ್ಯ ಲಕ್ಷಣ ಕಂಡು ಬರುವ ರೋಗಿಗಳಿಗೆ ಚಿಕಿತ್ಸೆ ಒದಗಿಸುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ್ ಡಿಎಚ್‌ಒಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ತಹಶೀಲ್ದಾರರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಕೋವಿಡ್ 19 ವೈರಾಣು ತೀವ್ರ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ವಹಿಸುವ ನಿಟ್ಟಿನಲ್ಲಿ ಜನತೆಗೆ ಈಗ ಸಕಾಲಕ್ಕೆ ಚಿಕಿತ್ಸೆ ಕೊಡಬೇಕಿದೆ. ಹೀಗೆ ತಿಳಿಸಿದಾಗ್ಯೂ ಖಾಸಗಿ ಆಸ್ಪತ್ರೆಗಳು ಮುಚ್ಚಿದಲ್ಲಿ ಅಂತಹ ಖಾಸಗಿ ಕ್ಲಿನಿಕ್‌ಗಳ ಪರವಾನಗಿ ರದ್ದುಪಡಿಸಲು ಕ್ರಮ ವಹಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು.
ತಾಲೂಕು ವ್ಯಾಪ್ತಿಯಲ್ಲಿ ಇರುವ ಕಿರಾಣಿ, ತರಕಾರಿ ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ನೀಡುತ್ತಿರುವುದಾಗಿ ದೂರುಗಳು ಕೇಳಿ ಬಂದಿದ್ದು, ಅಂತಹ ಅಂಗಡಿಗಳನ್ನು ಗುರುತಿಸಿ ಅವುಗಳನ್ನು ಮುಚ್ಚಿ ಕಾನೂನು ಕ್ರಮ ವಹಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.
ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ರಸ್ತೆ ಮೇಲೆ ಮುಳ್ಳು ಮತ್ತು ಇನ್ನಿತರ ವಸ್ತುಗಳನ್ನು ಹಾಕಿ ರಸ್ತೆ ಬಂದ್ ಮಾಡಿರುವುದು ಜತೆಗೆ ಗ್ರಾಮಸ್ಥರು ಗುಂಪಾಗಿ ಸೇರುವುದು ಕಂಡು ಬರುತ್ತಿದೆ. ಅಧಿಕಾರಿಗಳ ವಾಹನಗಳನ್ನು ಗ್ರಾಮದೊಳಗಡೆ ಬಿಡುತ್ತಿಲ್ಲ. ಇದರಿಂದ ಕರ್ತವ್ಯನಿರತ ಅಧಿಕಾರಿಗಳಿಗೆ ತೊಂದರೆಯಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದನ್ನು ನಿರ್ಬಂಧಿ ಸಬೇಕು ಎಂದು ಎಡಿಸಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಚೆಕ್ ಪೋಸ್ಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಕಾರ್ಯನಿರತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡುಬೇಕು. ಇದಕ್ಕಾಗಿ ಚೆಕ್‌ಪೋಸ್ಟ್ ಹತ್ತಿರ ಇರುವ ವಸತಿ ನಿಲಯಗಳು ಮತ್ತು ಅಂಗನವಾಡಿಗಳನ್ನು ಗುರುತಿಸಿ ಸಿಇಒಗೆ ಮಾಹಿತಿ ನೀಡಿ, ಊಟದ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದರು.
ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸಿ ಅಕ್ಷಯ್ ಶ್ರೀಧರ್, ಡಿಎಚ್‌ಒಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ, ಡಿಯುಸಿ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟಪ್ಪಗೋಳ, ಪೌರಾಯುಕ್ತ ಬಸಪ್ಪ, ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ.ರತಿಕಾಂತ ಸ್ವಾಮಿ, ಇಂದುಮತಿ ಪಾಟೀಲ, ಜಿಲ್ಲಾ ಕಣ್ಗಾವಲು ಘಟಕದ ಡಾ.ಕೃಷ್ಣಾರೆಡ್ಡಿ ಹಾಗೂ ಇತರರು ಇದ್ದರು.