ಚಿತ್ರದುರ್ಗ: ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಅಧಿ ಕಾರದಲ್ಲಿದ್ದಾಗ ಜಾರಿ ಮಾಡಿದ್ದ ರೈತಪರ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರಕಾರ ರದ್ದು ಮಾಡಿದೆ. ಈ ನಿಟ್ಟಿನಲ್ಲಿ ರೈತರ ಹಿತರಕ್ಷಣೆಗಾಗಿ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ ಮಕ್ಕಳ ಶಿಕ್ಷಣಕ್ಕೆ ಸ್ಕಾಲರ್‌ಶಿಪ್ ಕೊಡುತ್ತಿದ್ದರು. ಅದನ್ನು ಈಗಿನ ರಾಜ್ಯ ಸರಕಾರ ರದ್ದುಪಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ರೈತರ ಒಂದು ಹೆಕ್ಟೇರ್‌ಗೆ 6800 ರೂ. ಬದಲಾಗಿ 13,500 ರೂ.ಗಳನ್ನು ನಮ್ಮ ಸರಕಾರ ಇದ್ದಾಗ ನೀಡಲಾಗಿತ್ತು. ನೀರಾವರಿ ಬೆಳೆಗೆ ಒಂದು ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರವನ್ನು ಯಡಿಯೂರಪ್ಪ ಘೋಷಿಸಿ ರೈತರಿಗೆ ತಲುಪಿಸಿದ್ದರು. ಬಹುವಾರ್ಷಿಕ ಬೆಳೆಗಳಿಗೆ 18 ಸಾವಿರ ರೂ. ಕೊಡಬೇಕಾಗಿತ್ತು. ಇದಕ್ಕೆ ಹತ್ತು ಸಾವಿರ ಸೇರಿಸಿ 28 ಸಾವಿರ ರೂ.ಗಳನ್ನು ಎರಡು ಕಂತಿನಲ್ಲಿ ರೈತರಿಗೆ ನೀಡಲಾಗಿತ್ತು ಎಂದು ವಿವರಿಸಿದರು.
ಬರ ಘೋಷಣೆಯಾಗಿ ಆರು ತಿಂಗಳಾಗಿದೆ. ಕೆಲವು ರೈತರಿಗೆ ಪರಿಹಾರ ಸಿಕ್ಕಿದ್ದರೆ, ಇನ್ನುಳಿದವರಿಗೆ ಸಿಕ್ಕಿಲ್ಲ. ಕೇಂದ್ರದ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ಸರಕಾರ ರಾಜ್ಯದ ರೈತರನ್ನು ದಿಕ್ಕು ತಪ್ಪಿಸುತ್ತಿದೆ. ಕೇಂದ್ರದಿಂದ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ರಾಜ್ಯಕ್ಕೆ 639 ಕೋಟಿ ರೂ. ಬಂದಿರುವುದನ್ನು ಬಿಟ್ಟರೆ ರಾಜ್ಯ ಸರಕಾರದ ನಯಾಪೈಸೆಯೂ ರೈತರಿಗೆ ಸಿಕ್ಕಿಲ್ಲ. ಹಾನಿಗೊಳಗಾಗಿರುವ ಬೆಳೆಗಳ ಸರ್ವೇ ನಡೆಸಿ ತಕ್ಷಣವೇ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.