Advertisement

“ಬೈಕಂಪಾಡಿಯಲ್ಲಿ ರಿಟೇಲ್‌ ವ್ಯಾಪಾರ ನಡೆಸಿದರೆ ಲೈಸನ್ಸ್‌ ರದ್ದು’

09:02 PM Apr 16, 2020 | Sriram |

ಮಂಗಳೂರು: ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಮತ್ತು ಹಣ್ಣು ಹಂಪಲುಗಳ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ರಿಟೇಲ್‌ ಮಾರಾಟಕ್ಕೆ ಅವಕಾಶವಿಲ್ಲ. ಅಲ್ಲಿ ಚಿಲ್ಲರೆ ವ್ಯಾಪಾರ ನಡೆಸಿದರೆ ಅಂಥವರ ಲೈಸನ್ಸ್‌ ರದ್ದುಪಡಿಸಲಾಗುವುದು ಎಂದು ಶಾಸಕ ಡಾ| ವೈ. ಭರತ್‌ ಶೆಟ್ಟಿ ತಿಳಿಸಿದ್ದಾರೆ.

Advertisement

ಬೈಕಂಪಾಡಿ ಎಪಿಎಂಸಿ ಯಾರ್ಡ್‌ ನಲ್ಲಿ ವ್ಯಾಪಾರಿಗಳು ಚಿಲ್ಲರೆ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಡಾ| ಭರತ್‌ ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಯರ್‌ ದಿವಾಕರ್‌ ಮತ್ತು ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಅವರು ಬೈಕಂಪಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಿಟೇಲ್‌ ವ್ಯವಹಾರ ನಡೆಸಿದರೆ ಲೈಸನ್ಸ್‌ ರದ್ದು ಪಡಿಸುವುದಲ್ಲದೆ ಅವರಿಗೆ ಈ ಹಿಂದೆ ಎಪಿಎಂಸಿ ಒಳಗೆ ಬರಲು ನೀಡಲಾಗಿದ್ದ ಅನುಮತಿಯನ್ನು ಕೂಡ ರದ್ದುಪಡಿಸಲಾಗುವುದು ಎಂದರು.

ಬೈಕಂಪಾಡಿಯಲ್ಲಿ ವ್ಯವಹಾರ ನಡೆಸಲು ಸೆಂಟ್ರಲ್‌ ಮಾರ್ಕೆಟ್‌ಗಿಂತ ಉತ್ತಮ ವ್ಯವಸ್ಥೆಗಳಿವೆ. 10 ದಿನಗಳ ಬಳಿಕ ಸಭೆ ಕರೆದು ಇಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಸಮಸ್ಯೆಗಳಿದ್ದರೆ ಪರಿಹಾರ ಸೂಚಿಸಲಾಗುವುದು ಎಂದರು.

ಸಗಟು ವ್ಯಾಪಾರಿಗಳಿಂದ 3 ತಿಂಗಳ ಕಾಲ ಯಾವುದೇ ಬಾಡಿಗೆ ಅಥವಾ ತೆರಿಗೆಯನ್ನು ವಸೂಲು ಮಾಡುವುದಿಲ್ಲ. ಆದರೆ ಇಲ್ಲಿ ವಹಿವಾಟು ನಡೆಸಲು ಆಸಕ್ತಿ ಇರುವ ಎಲ್ಲರೂ ಲೈಸನ್ಸ್‌ ಪಡೆಯುವ ಬಗ್ಗೆ ಈಗಿಂದೀಗಲೇ ಅರ್ಜಿ ಸಲ್ಲಿಕೆ ಮತ್ತಿತರ ಪ್ರಕ್ರಿಯೆಗಳನ್ನು ಆರಂಭಿಸಬೇಕು. 3 ತಿಂಗಳ ಬಳಿಕ ಅಧಿಕೃತವಾಗಿ ಲೈಸನ್ಸ್‌ ಪಡೆದು ವ್ಯವಹಾರ ನಡೆಸಬಹುದು ಎಂದು ಶಾಸಕರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next