Advertisement

ಕನ್ನಡ ಕಡೆಗಣಿಸಿದರೆ ಪರವಾನಗಿ ರದ್ದು!

11:57 AM Jul 18, 2017 | |

ಬೆಂಗಳೂರು: ನಗರ ವ್ಯಾಪ್ತಿಯ ಅಂಗಡಿ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಕನ್ನಡ ನಾಮಫ‌ಲಕ ಅಳವಡಿಕೆಗೆ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಆಯುಕ್ತರಿಗೆ ಮತ್ತು ನಿವೇಶನ ಖರೀದಿಗೆ ನಗರದಲ್ಲಿ ವಾಸದ ಮಿತಿಯನ್ನು 5 ವರ್ಷಕ್ಕೆ ಇಳಿಸಿರುವುದನ್ನು ರದ್ದುಪಡಿಸಿ ಈ ಹಿಂದೆ ಇದ್ದ 15 ವರ್ಷದ ಅವಧಿಯನ್ನು ಮುಂದುವರಿಸುವಂತೆ ಆಗ್ರಹಿಸಿ ಬಿಡಿಎ ಆಯುಕ್ತರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಬಿಬಿಎಂಪಿ ಹಾಗೂ ಬಿಡಿಎ ಕೇಂದ್ರ ಕಚೇರಿಗಳ ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆ ಕುರಿತು ಸೋಮವಾರ ಪ್ರತ್ಯೇಕ ಸಭೆಗಳನ್ನು ನಡೆಸಿದ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ತಂಡ, ಪ್ರಗತಿ ಪರಿಶೀಲನೆ ನಡೆಸಿತು. ಈ ವೇಳೆ ಎರಡೂ ಕಚೇರಿಗಳಲ್ಲಿ ಆಡಳಿತ ಹಂತದಲ್ಲಿ ಕನ್ನಡ ಅನುಷ್ಠಾನದಲ್ಲಿ ಆಗುತ್ತಿರುವ ನಿರ್ಲಕ್ಷ್ಯಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಾಧಿಕಾರದ ತಂಡ, ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಾಲಮಿತಿ ನೀಡಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಗಡಿ ಅಥವಾ ವಾಣಿಜ್ಯ ಸಂಕೀರ್ಣಗಳಿಗೆ ಪರವಾನಿಗೆ ನೀಡಬೇಕಾದರೆ, ಕನ್ನಡ ನಾಮಫ‌ಲಕ ಅಳವಡಿಕೆಯ ಷರತ್ತು ಕಡ್ಡಾಯವಾಗಿದೆ. ಕನ್ನಡ ನಾಮಫ‌ಲಕ ಅಳವಡಿಸಿಕೊಳ್ಳದಿದ್ದರೆ ಪರವಾನಿಗೆ ರದ್ದುಗೊಳಿಸಬೇಕು ಎಂದು ಸ್ಪಷ್ಟ ಕಾನೂನು ಇದೆ. ಈ ಕಾನೂನು ಬಂದು 15 ವರ್ಷ ಆಗಿದ್ದರೂ, ಅದರ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಎಸ್‌.ಜಿ. ಸಿದ್ದರಾಮಯ್ಯ, ಈ ಬಗ್ಗೆ ಕಾಲಮಿತಿಯೊಳಗೆ ಸೂಕ್ತ ಕ್ರಮ ಜರುಗಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ ಪ್ರಸಾದ್‌, ಈ ಒಂದು ವಾರದೊಳಗೆ ಮತ್ತೂಂದು ಸುತ್ತೋಲೆ ಹೊರಡಿಸಿ, ಕನ್ನಡ ನಾಮಫ‌ಲಕ ಅಳವಡಿಕೆಗೆ ಅಭಿಯಾನ ರೂಪದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಬಿಡಿಎ ವತಿಯಿಂದ ಅಭಿವೃದ್ಧಿಪಡಿಸಲಾದ ನಿವೇಶನಗಳ ಖರೀದಿಗೆ ಕರ್ನಾಟಕದಲ್ಲಿ ವಾಸದ ಅವಧಿ 15 ವರ್ಷ ಇದ್ದದ್ದನ್ನು, ನಿವೇಶನಗಳು ಮಾರಾಟ ಆಗುತ್ತಿಲ್ಲ ಎಂಬ ಕಾರಣಕ್ಕೆ ವಾಸದ ಅವಧಿಯನ್ನು 5 ವರ್ಷಕ್ಕೆ ಇಳಿಸಿದ ಬಿಡಿಎ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಪ್ರಾಧಿಕಾರದ ಅಧ್ಯಕ್ಷರು,

ವಾಸದ ಅವಧಿ 5 ವರ್ಷ ನಿಗದಿಪಡಿಸಿದ ಆದೇಶವನ್ನು ತಕ್ಷಣ ವಾಪಸ್‌ ಪಡೆದುಕೊಂಡು ಈ ಹಿಂದೆ ಇದ್ದ 15 ವರ್ಷದ ಅವಧಿಯನ್ನೇ ಮುಂದುವರಿಸಬೇಕು. ನಿವೇಶನಗಳು ಮಾರಾಟ ಆಗುತ್ತಿಲ್ಲ ಎಂಬ ಕಾರಣಕ್ಕಾಗಿ ಕನ್ನಡಕ್ಕೆ ಹಿನ್ನಡೆಯಾಗುವಂತಹ ಕ್ರಮ ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಬಿಬಿಎಂಪಿ, ಬಿಡಿಎ ಹಿರಿಯ ಅಧಿಕಾರಿಗಳು, ಪ್ರಾಧಿಕಾರದ ಸದಸ್ಯರು, ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳಿಧರ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next