Advertisement

ರದ್ದಾಗಿದೆ, ಇಲ್ಲ ಆಗಿಲ್ಲ ! ಆನ್‌ಲೈನ್‌ ಶಿಕ್ಷಣ: ಮತ್ತೆ ಗೊಂದಲ

03:11 AM Jun 12, 2020 | Sriram |

ಬೆಂಗಳೂರು: ಶಾಲಾರಂಭದಿಂದ ಹಿಡಿದು ಆನ್‌ಲೈನ್‌ ಶಿಕ್ಷಣದವರೆಗೆ ಶಿಕ್ಷಣ ಇಲಾಖೆ, ಸರಕಾರದ ಕಡೆಯಿಂದ ಹುಟ್ಟಿಕೊಳ್ಳುತ್ತಿರುವ ಗೊಂದಲಗಳ ಸರಮಾಲೆ ಮುಂದುವರಿದಿದೆ. ಸಂಪುಟದ ಇಬ್ಬರು ಹಿರಿಯ ಸಚಿವರ ತದ್ವಿರುದ್ಧ ಹೇಳಿಕೆ ಗುರುವಾರದ ಬೆಳವಣಿಗೆ.
ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿ ಮತ್ತು ಅನಂತರದ ಬೆಳವಣಿಗೆಗಳು ಇದಕ್ಕೆ ಪುಷ್ಟಿ ನೀಡಿವೆ.

Advertisement

ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಗಳ ಸಚಿವ ಜೆ.ಸಿ. ಮಾಧುಸ್ವಾಮಿ, 7ನೇ ತರಗತಿಯ
ವರೆಗೂ ಆನ್‌ಲೈನ್‌ ಪಾಠ ಇಲ್ಲ, ಈ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ ಎಂದಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಟ್ವೀಟ್‌ ಮಾಡಿ, ಇಂಥ ನಿರ್ಧಾರ ಆಗಿಲ್ಲ. ಸಂಪುಟ ಸಭೆಯಲ್ಲಿ ಸಲಹೆ ಕೇಳಿಬಂದಿತ್ತಷ್ಟೇ ಎಂದರು. ಶಿಕ್ಷಣ ಸಚಿವರ ಟ್ವೀಟ್‌ ಅನಂತರ ಮತ್ತೆ ಮಾತನಾಡಿದ ಮಾಧುಸ್ವಾಮಿ, ಈ ವಿಚಾರದಲ್ಲಿ ಸಲಹೆ ಕೇಳಿಬಂದಿತ್ತಷ್ಟೇ, ನಿರ್ಧಾರವಾಗಿಲ್ಲ. ಶಿಕ್ಷಣ ಸಚಿವರ ತೀರ್ಮಾನವೇ ಅಂತಿಮ ಎಂದರು. ಈ ಮೂಲಕ ಯಾರ ಮಾತು ಸರಿ, ಯಾರದ್ದು ತಪ್ಪು ಎಂಬ ಜಿಜ್ಞಾಸೆ ಜನತೆಯಲ್ಲಿ ಮೂಡುವಂತಾಯಿತು. ಸಚಿವರ ನಡುವೆ ಸಮನ್ವಯ ಇಲ್ಲವೇ ಎಂಬ ಅನುಮಾನವೂ ಹುಟ್ಟಿತು.

7ರ ವರೆಗೂ ರದ್ದು: ಮಾಧುಸ್ವಾಮಿ
ಸಚಿವ ಸಂಪುಟ ಸಭೆಯ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮಾತನಾಡಿ, ಆನ್‌ಲೈನ್‌ ತರಗತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. 5ನೇ ತರಗತಿಯವರೆಗೂ ಆನ್‌ಲೈನ್‌ ತರಗತಿ ಬೇಡ ಎಂದು ಬುಧವಾರ ತೀರ್ಮಾನ ಕೈಗೊಳ್ಳಲಾಗಿದೆ. ಅದನ್ನು ಏಳನೇ ತರಗತಿಯವರೆಗೂ ವಿಸ್ತರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಅಂತೆಯೇ ನಿರ್ಧರಿಸಲಾಯಿತು. ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯಬೇಕು ಎಂದು ತೀರ್ಮಾನಿಸಲಾಯಿತು ಎಂದರು.

ತೀರ್ಮಾನ ಆಗಿಲ್ಲ: ಸುರೇಶ್‌ ಕುಮಾರ್‌
ಈ ಹೇಳಿಕೆಯ ಬೆನ್ನಲ್ಲೇ, ಸಭೆಯಲ್ಲಿ ಕೇವಲ ಸಲಹೆ ಯನ್ನಷ್ಟೇ ನೀಡಲಾಗಿದೆ. ಆದರೆ ಐದನೇ ತರಗತಿಯ ವರೆಗೆ ಆನ್‌ಲೈನ್‌ ತರಗತಿ ನಿಷೇಧ ತೀರ್ಮಾನವೇ ಅಂತಿಮ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು. ಈ ಬಗ್ಗೆ ಟ್ವೀಟ್‌ ಕೂಡ ಮಾಡಿದರು.

ಯೂ ಟರ್ನ್
ಇದರ ಬೆನ್ನಲ್ಲೇ ಸಚಿವ ಮಾಧುಸ್ವಾಮಿ, ಆನ್‌ಲೈನ್‌ ತರಗತಿ ಬಗ್ಗೆ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವಷ್ಟೆ. ಅಧಿಕೃತ ತೀರ್ಮಾನವಾಗಿಲ್ಲ. ಸುರೇಶ್‌ ಕುಮಾರ್‌ ಹೇಳಿಕೆಯೇ ಅಂತಿಮ ಎಂದರು. ಸಚಿವರ ನಡುವೆ ಸಮನ್ವಯದ ಕೊರತೆ ಮತ್ತು ಆನ್‌ಲೈನ್‌ ತರಗತಿ ರದ್ದತಿಯನ್ನು ವಿಸ್ತರಿಸುವುದು ಬೇಡ ಎಂಬ ಒತ್ತಡ ಹೆಚ್ಚಾಗಿರುವುದು ಇದರಿಂದ ಬಹಿರಂಗಗೊಂಡಿತು.

Advertisement

ಲಾಬಿಗೆ ಮಣಿದರೇ?
ಸಾರ್ವಜನಿಕ ವಲಯದಲ್ಲಿ ಹತ್ತನೇ ತರಗತಿಯ ವರೆಗೂ ಆನ್‌ಲೈನ್‌ ಶಿಕ್ಷಣ ಬೇಕಿಲ್ಲ ಎಂಬ ಅಭಿಪ್ರಾಯ ಇದ್ದರೂ ಬುಧವಾರ ಐದನೇ ತರಗತಿಯ ವರೆಗೆ ಮಾತ್ರ ನಿಷೇಧಗೊಳಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಸಾರ್ವಜನಿಕ ವಲಯದ ಅಭಿಪ್ರಾಯದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿ, ಏಳನೇ ತರಗತಿಯ ವರೆಗೂ ಅದನ್ನು ವಿಸ್ತರಿಸಿ ಎಂದು ತಿಳಿಸಿದರೂ ಅದು ಕೇವಲ ಸಲಹೆಯಷ್ಟೇ, ಅಧಿಕೃತ ತೀರ್ಮಾನವಲ್ಲ ಎಂದು ಅಲ್ಲಗಳೆಯಲಾಯಿತು.

ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಸಚಿವರು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, 7ನೇ ತರಗತಿಯ ವರೆಗೂ ಆನ್‌ಲೈನ್‌ ಶಿಕ್ಷಣ ರದ್ದು ಮಾಡಲು ಸಚಿವ ಸಂಪುಟವೇ ಸಿದ್ಧವಿರುವಾಗ ಶಿಕ್ಷಣ ಸಚಿವರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಶೇ. 50 ಶುಲ್ಕ ಬಗೆಗೂ ನಡೆದ ಚರ್ಚೆ
ಸಂಪುಟದಲ್ಲಿ ಹತ್ತನೇ ತರಗತಿಯವರೆಗೂ ಆನ್‌ಲೈನ್‌ ಶಿಕ್ಷಣ ಅನಗತ್ಯ ಎಂಬ ಬಗ್ಗೆಯೂ ಪ್ರಸ್ತಾವವಾಯಿತು. ಅಂತಿಮವಾಗಿ ಏಳನೇ ತರಗತಿಯ ವರೆಗೂ ನಿಷೇಧ ವಿಸ್ತರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಖಾಸಗಿ ಶಾಲೆಗಳು ಶೇ.50ರಷ್ಟು ಶುಲ್ಕ ಮಾತ್ರ ಕಟ್ಟಿಸಿಕೊಳ್ಳಬೇಕು ಎಂಬುದಾಗಿ ಸರಕಾರ ಆದೇಶಿಸಬೇಕು ಎಂಬ ಬೇಡಿಕೆಗಳು ಸಾರ್ವಜನಿಕರಿಂದ ಬರುತ್ತಿರುವ ಬಗ್ಗೆ ಪ್ರಸ್ತಾವವಾಯಿತು. ಆದರೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ಶಾಲೆ ಆರಂಭದ ಕುರಿತ ಗೊಂದಲದ ಬಗ್ಗೆ ಚರ್ಚೆಯಾಗಿ ಕೇಂದ್ರ ಸರಕಾರದ ಸೂಚನೆ ನೋಡಿ ಮುಂದುವರಿಯಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಇಲಾಖೆಯ ಅಧಿಕೃತ ಆದೇಶ
ರಾಜ್ಯದಲ್ಲಿ ಎಲ್‌ಕೆಜಿ, ಯುಕೆಜಿ ಸೇರಿ 5ನೇ ತರಗತಿಯ ವರೆಗೂ ಆನ್‌ಲೈನ್‌ ಶಿಕ್ಷಣ ರದ್ದು ಮಾಡಲಾಗಿದೆ. ಯೂಟ್ಯೂಬ್‌ ಮೂಲಕ ವೀಡಿಯೋ ಕ್ಲಾಸ್‌ ಕೂಡ ನಡೆಸುವಂತಿಲ್ಲ. 6ರಿಂದ 10ನೇ ತರಗತಿಗಳವರೆಗೆ ಆನ್‌ಲೈನ್‌ ಶಿಕ್ಷಣ ಮತ್ತು ಪರ್ಯಾಯ ಬೋಧನೆ ಕುರಿತು ತಜ್ಞರ ಸಮಿತಿ ವರದಿ ನೀಡಿದ ಅನಂತರ ತೀರ್ಮಾನಿಸಲಾಗುವುದು. ಈ ಸಂಬಂಧ ತಜ್ಞರ ವರದಿ ಅನ್ವಯ ಸಮಗ್ರ ಮಾರ್ಗಸೂಚಿ ಬರಲಿದೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ.

ಆನ್‌ಲೈನ್‌ ಕ್ಲಾಸ್‌ ನಿಂತಿಲ್ಲ
ಸರಕಾರ ಮತ್ತು ಶಿಕ್ಷಣ ಇಲಾಖೆ 5ನೇ ತರಗತಿಯ ವರೆಗೆ ಆನ್‌ಲೈನ್‌ ಶಿಕ್ಷಣ ರದ್ದು ಮಾಡಿದ್ದರೂ ಕೆಲವು ಪ್ರತಿಷ್ಠಿತ ಶಾಲೆಗಳು ಇದನ್ನು ಲಕ್ಷಿಸಿಲ್ಲ. ಸರಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಇನ್ನೂ ನಿರ್ಧಾರ ಆಗಿಲ್ಲ
ಐದನೇ ತರಗತಿಯವರೆಗೂ ಆನ್‌ಲೈನ್‌ ಶಿಕ್ಷಣ ರದ್ದು ಮಾಡಿದ್ದೇವೆ. ಉಳಿದ ತರಗತಿಗಳ ಆನ್‌ಲೈನ್‌ ಶಿಕ್ಷಣದ ವಿಚಾರ ಹೇಗೆ, ಏನು ಎಂಬುದರ ಕುರಿತು ಸಮಿತಿ ರಚನೆ ಮಾಡಲಾಗುವುದು. ಸಚಿವ ಸಂಪುಟದಲ್ಲಿ ಇದು ಚರ್ಚೆ ಆಗಿಲ್ಲ. ಸಭೆ ಮುಗಿದ ಅನಂತರ ಅನೌಪಚಾರಿಕ ಚರ್ಚೆ ಸಂದರ್ಭದಲ್ಲಿ ಕೆಲವು ಸಚಿವರು 7ನೇ ತರಗತಿಯವರೆಗೂ ವಿಸ್ತರಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದು ನಿರ್ಧಾರವಾಗಿಲ್ಲ.
-ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next