ಬೆಂಗಳೂರು: ಕೆಪಿಎಸ್‌ಸಿ ಸದಸ್ಯ ಸ್ಥಾನದಿಂದ ಮಂಗಳಾ ಶ್ರೀಧರ್ ಅವರನ್ನು ಅಮಾನತುಗೊಳಿಸಿದ್ದ ರಾಜ್ಯಪಾಲರ ಆದೇಶವನ್ನು ಸೋಮವಾರ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ.
2014ರಲ್ಲಿ ರಾಜ್ಯಪಾಲರ ಕ್ರಮ ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಮಂಗಳಾ ಶ್ರೀಧರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ, ರಾಜ್ಯಪಾಲರ ಆದೇಶ ಹಾಗೂ ಏಕಸದಸ್ಯ ಪೀಠದ ತೀರ್ಪು ರದ್ದುಪಡಿಸಿದೆ.
ಅಲ್ಲದೆ ಮಂಗಳಾ ಶ್ರೀಧರ್ ಅವರನ್ನು ಕೆಪಿಎಸ್‌ಸಿ ಸದಸ್ಯ ಸ್ಥಾನಕ್ಕೆ ನೇಮಕಗೊಳಿಸುವುದು ಹಾಗೂ 2014ರಿಂದ ಇದುವರೆಗೆ ತಡೆಹಿಡಿಯಲಾಗಿದ್ದ ವೇತನ, ಭತ್ಯೆ ಸೇರಿದಂತೆ ಮತ್ತಿತರ ಸವಲತ್ತುಗಳನ್ನು ಕೊಡಬೇಕು ಎಂದು ರಾಜ್ಯಸರ್ಕಾರಕ್ಕೆ ಸೂಚಿಸಿತು . ಕೆಪಿಎಸ್‌ಸಿ ಸದಸ್ಯ ಸ್ಥಾನದಿಂದ ಅಮಾನತುಗೊಳಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ.
ಅಲ್ಲದೆ ಅಮಾನತುಗೊಳಿಸುವ ಮುನ್ನ ಸಚಿವ ಸಂಪುಟದ ತೀರ್ಮಾನವೂ ನಡೆದಿರಲಿಲ್ಲ. ಜತೆಗೆ ಅಮಾನತುಗೊಳಿಸಿದ ಆದೇಶವನ್ನು ರಾಷ್ಟ್ರಪತಿಗೆಗೆ ಕಳುಹಿಸಿಕೊಡಬೇಕು, ಈ ಸಂಬಂಧ ರಾಷ್ಟ್ರಪತಿ ಸುಪ್ರೀಂಕೋರ್ಟ್‌ಗೆ ಶಿಫಾರಸು ಕಳುಹಿಸಿಕೊಡಬೇಕು. ಆದರೆ ಇದುವರೆಗೂ ಈ ಪ್ರಕ್ರಿಯೆಗಳು ಪಾಲನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಏನಿದು ಪ್ರಕರಣ?: 2011ರ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಎ ಹಾಗೂ ಬಿ ವೃಂದ ನೇಮಕ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿಯಲ್ಲಿ ಸದಸ್ಯೆಯಾಗಿದ್ದ ಮಂಗಳಾ ಶ್ರೀಧರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ದಾಖಲಾಗಿದ್ದ ದೂರಿನ ಅನ್ವಯ, 2014ರಲ್ಲಿ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿ ಮಂಗಳಾ ಶ್ರೀಧರ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿದ್ದರು. ಈ ಹಿನ್ನೆಲೆಯಲ್ಲಿ 2014ರ ಮೇ 14ರಂದು ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಬಾರದ್ವಾಜ್ ಅವರು ಮಂಗಳಾ ಶ್ರೀಧರ್ ಅವರನ್ನು ಸದಸ್ಯ ಸ್ಥಾನದಿಂದ ಅಮಾನತುಗೊಳಿಸಿದ್ದರು.