ರಬಕವಿ-ಬನಹಟ್ಟಿ: ಪಾವರಲೂಮ್ ಮಗ್ಗಗಳ ಮೇಲೆ ಇಲಾಖೆ ವಿತರಿಸುತ್ತಿರುವ ನಿಗದಿತ ಶುಲ್ಕನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಸ್ಥಳೀಯ ಜೋಡಣಿ ದಾರ ನೇಕಾರರ ಮುಖಂಡ ಕುಬೇರ ಸಾರವಾಡ ಹೇಳಿದರು.
ಸ್ಥಳೀಯ ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಜಿ.ಕಲಕಂಬ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈಗಾಗಲೇ ಕೋವಿಡ್ನಿಂದಾಗಿ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಜಿಎಸ್ಟಿಯಿಂದಗಿ ಜವಳಿ ಉದ್ಯಮಕ್ಕೆ ಹಾಗೂ ನೇಕಾರರಿಗೆ ಬಹಳಷ್ಟು ತೊಂದರೆಯಾಗಿದೆ. ಈಗ ಇಲಾಖೆಯು ಪಾವರಲೂಮ್ ಮಗ್ಗಗಳ ಮೇಲೆ ನಿಗದಿತ ಶುಲ್ಕ ಹಾಕುವುದರಿಂದ ನೇಕಾರರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಇಲಾಖೆ ಕೂಡಲೇ ನಿಗದಿತ ಶುಲ್ಕ ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕುಬೇರ ಸಾರವಾಡಿ ಸರ್ಕಾರ ಮತ್ತು ಇಲಾಖೆಗೆ ಎಚ್ಚರಿಕೆ ನೀಡಿದರು.
ಇದಕ್ಕೂ ಪೂರ್ವದಲ್ಲಿ ನೇಕಾರರು ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನದಿಂದ ಇಲಾಖೆಯ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ನಂತರ ಸ್ಥಳೀಯ ಹೆಸ್ಕಾಂ ಅಧಿಕಾರಿ ಎಸ್.ಜಿ.ಕಲಕಂಬ ಅವರಿಗೆ ಮನವಿ ಸಲ್ಲಿಸಿದರು. ಪರಮಾನಂದ ಭಾವಿಕಟ್ಟಿ, ಬಸವರಾಜ ಮುರಗೋಡ, ಮಹಾದೇವ ನುಚ್ಚಿ, ನಾಮದೇವ ಮಾನೆ, ಬಸವರಾಜ ಕೊಪ್ಪದ, ಸುರೇಶ ಮಠದ ಇದ್ದರು.