ರಾಯಚೂರು: ಸರ್ಕಾರ ನೌಕರರಿಗೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಅಖೀಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸದಸ್ಯರು ಗುರುವಾರ ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಗುರುವಾರ ಮನವಿ ಸಲ್ಲಿಸಿದರು.
2006ರಿಂದ ರಾಜ್ಯದಲ್ಲಿ ಜಾರಿಗೊಳಿಸಿರುವ ಪಿಎಸ್‌ಆರ್‌ಡಿ ಕಾಯ್ದೆ ಪ್ರಯೋಜಿತ ಎನ್‌ಪಿಎಸ್ ಯೋಜನೆಯಿಂದಾಗಿ ರಾಜ್ಯ ಸರ್ಕಾರಿ ನೌಕರರಿಂದ ನಿಶ್ಚಿತ ಪಿಂಚಣಿ ಕಸಿದುಕೊಳ್ಳಲಾಗುತ್ತಿದೆ ಎಂದು ದೂರಿದರು.
ಎನ್‌ಪಿಎಸ್ ಯೋಜನೆಯಡಿ ಸಂಗ್ರಹವಾಗುವ ಶೇ.10ರಷ್ಟು ನೌಕರರ ವಂತಿಕೆ ಮತ್ತು ಶೇ.14ರಷ್ಟು ಸರ್ಕಾರದ ವಂತಿಕೆಯನ್ನು ಪಿಎಫ್‌ಆರ್‌ಡಿಎ ಸಂಸ್ಥೆ ಫಂಡ್ ಮ್ಯಾನೇಜರ್‌ಗಳ ಮೂಲಕ ಷೇರು ಪೇಟೆಯಲ್ಲಿ ತೊಡಗಿಸುತ್ತಿದ್ದು, ಕಳೆದ 18 ವರ್ಷಗಳ ಸರ್ಕಾರಿ ನೌಕರರ ಹಣವನ್ನು ಖಾಸಗಿ ಕಂಪೆನಿಗಳ ಷೇರು ಖರೀದಿಗೆ ವಿನಿಯೋಗಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು ಹಾಗೂ ಏಳನೇ ವೇತನ ಆಯೋಗ ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ರಚಿಸಬೇಕು ಎಂದು ಒತ್ತಾಯಿಸಿದರು.
2ನೇ ಆಡಳಿತ ಸುಧಾರಣೆ ಆಯೋಗವು ಹುದ್ದೆಗಳ ಕಡಿತವನ್ನು ಹಾಗೂ ಅನುಕಂಪ ಆಧಾರಿತ ಉದ್ಯೋಗ ರದ್ದುಪಡಿಸಬೇಕು ಎಂಬ ಶಿಫಾರಸ್ಸನ್ನು ತಿರಸ್ಕರಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ತಾಯಪ್ಪ ಮರ್ಚಟ್‌ಹಾಳ್, ಪ್ರಧಾನ ಕಾರ್ಯದರ್ಶಿ ಮೈನುದ್ದೀನ್, ರಾಜ್ಯ ಜಂಟಿ ಕಾರ್ಯದರ್ಶಿ ನಾರಾಯಣ, ರಾಜ್ಯ ಹಿರಿಯ ಉಪಾಧ್ಯಕ್ಷ ಅಮರೇಶಪ್ಪ, ಪದಾಧಿಕಾರಿಗಳಾದ ಶಹಬುದ್ದೀನ್, ಸುಧಾಕರ, ಮಧುಕಾಂತ, ವಿಜಯಕುಮಾರ, ಮುನೀರ್ ಅಹಮ್ಮದ ಅಮರೇಗೌಡ, ಮಲ್ಲಿಕಾರ್ಜುನ ಸೇರಿ ಇತರರಿದ್ದರು.