ಬೆಂಗಳೂರು: ಕನ್ನಡವನ್ನು ಒಂದು ಭಾಷೆಯಾಗಿ ಬೋಧನೆ ಮಾಡದ ಸಿಬಿಎಸ್‌ಇ ಮತ್ತು ಐಸಿಎಎಸ್ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಿಕ್ಷಣ ಇಲಾಖೆಯಲ್ಲಿ ಕನ್ನಡ ಅನುಷ್ಠಾನದ ಕುರಿತು ಮಂಗಳವಾರ ನೃಪತುಂಗ ರಸ್ತೆಯ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಖಾಸಗಿ ಶಾಲೆಗಳಲ್ಲಿ ಕನ್ನಡ ಒಂದು ವಿಷಯವಾಗಿ ಬೋಧಿಸಬೇಕು ಎಂಬುದನ್ನು 2015ರಲ್ಲೇ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಈ ಸಂಬಂಧ ಕಾಯ್ದೆ ಜಾರಿಗೆ ತಂದಿದೆ. ಇಷ್ಟಾದರೂ ಕನ್ನಡ ಬೋಧಿಸದ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳ ಪಟ್ಟಿ ಸಿದ್ಧಪಡಿಸಿ, ಮಾನ್ಯತೆ ರದ್ದತಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ನಿಯಂತ್ರಣ ಸಾರ್ವಜನಿಕ ಶಿಕ್ಷಣ ವ್ಯಾಪ್ತಿಗೆ ಬರುವುದಿಲ್ಲ. ಇವುಗಳು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳ ಅಧೀನದಲ್ಲಿ ಇರುವುದರಿಂದ, ನಾವು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಂಡಳಿಗೆ ಪತ್ರ ಬರೆಯಬಹುದಷ್ಟೆ. ಈ ಶಾಲೆಗಳಲ್ಲಿ ಭಾಷಾ ವಿಷಯ ಎರಡು ಮಾತ್ರ. ಹೀಗಾಗಿ ಹಿಂದಿ, ಇಂಗ್ಲಿಷ್‌ಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ ಸವಲತ್ತು ಪಡೆದು ಕನ್ನಡ ಬೋಧಿಸದಿರುವುದು ಕಾನೂನಿಗೆ ವಿರುದ್ಧ. ಅಂತಹ ಶಾಲೆಗಳ ವಿರುದ್ಧ ಅಗತ್ಯ ಕ್ರಮ ಆಗಲೇಬೇಕು. ಆರ್‌ಟಿಇ ಅಡಿಗಳಲ್ಲಿ ಖಾಸಗಿ ಶಾಲೆಗಳಿಗೆ ಕೋಟ್ಯಂತರ ರೂ. ನೀಡುವುದನ್ನು ನಿಲ್ಲಿಸಬೇಕು. ಆ ಹಣವನ್ನು ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಸಲಹೆ ನೀಡಿದರು.
ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಕನ್ನಡ ಅನುಷ್ಠಾನ ಹಾಗೂ ಆದೇಶ, ಕಡತದಲ್ಲಿ ಕನ್ನಡ ಹೆಚ್ಚಾಗಿ ಬಳಕೆ ಆಗುತ್ತಿರುವುದಕ್ಕೆ ಪ್ರಾಧಿಕಾರ ಶ್ಲಾಘನೆ ವ್ಯಕ್ತಪಡಿಸಿದೆ. ಸಭೆಯಲ್ಲಿ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಭಾಗದ ನಿರ್ದೇಶಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.