Advertisement
ಬಿಬಿಎಂಪಿ ಕೌನ್ಸಿಲ್ ಸಭೆಯ ನಿರ್ಣಯವನ್ನು ಪ್ರಶ್ನಿಸಿ ಹಲವು ಜಾಹೀರಾತು ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಬುಧವಾರ ತೀರ್ಪು ಪ್ರಕಟಿಸಿ, ಒಂದು ವರ್ಷದ ಮಟ್ಟಿಗೆ ಎಲ್ಲಾ ಬಗೆಯ ಜಾಹೀರಾತು ಗಳನ್ನು ನಿಷೇಧಿಸಿ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯ ರದ್ದುಗೊಳಿಸಿ ಆದೇಶಿಸಿತು.
Related Articles
Advertisement
ಬಿಬಿಎಂಪಿ ನಿರ್ಣಯ ಪ್ರಶ್ನಿಸಿ ಸಲ್ಲಿಸಲಾಗಿರುವ ಜಾಹೀರಾತು ಕಂಪನಿಗಳ ವೈಯಕ್ತಿಕ ಮನವಿಗಳನ್ನು ಪರಿಗಣಿಸಿ ನ್ಯಾಯಪೀಠ ಈ ಆದೇಶ ಮಾಡುತ್ತಿದೆ. ಆದರೆ, ಅನಧಿಕೃತ ಜಾಹೀರಾತುಗಳ ನಿಯಂತ್ರಣ ಹಾಗೂ ನಿಷೇಧಕ್ಕೆ ಸಂಬಂಧಿಸಿದ ವಿಚಾರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ವಿಭಾಗೀಯ ಪೀಠದ ಮುಂದೆ ಪರಿಹರಿಸಿಕೊಳ್ಳಬಹುದು.
ಅರ್ಜಿದಾರರ ವಾದ ಏನಿತ್ತು?: ಕೌನ್ಸಿಲ್ ಸಭೆಯ ನಿರ್ಣಯದಂತೆ ಬಿಬಿಎಂಪಿ ಜಾಹೀರಾತು ಗಳನ್ನು ನಿಷೇಧಿಸಿದೆ. ಆದರೆ. ಕೌನ್ಸಿಲ್ ಸಭೆಯ ನಿರ್ಣಯ ಕಾನೂನು ಅಲ್ಲ. ಅರ್ಜಿದಾರ ಜಾಹೀರಾತು ದಾರರು ಕಾನೂನು ಬದ್ಧ ಪರವಾನಿಗೆ ಪಡೆದುಕೊಂಡವರಾಗಿದ್ದಾರೆ. ಈ ಜಾಹೀರಾತು ದಾರರು ಅಳವಡಿಸಿರುವ ಜಾಹೀರಾತು ಫಲಕಗಳು ಖಾಸಗಿ ಆಸ್ತಿಗಳಲ್ಲಿವೆ. ಅಲ್ಲದೇ ಎಲ್ಲ ರೀತಿಯ ತೆರಿಗೆಗಳನ್ನು, ಶುಲ್ಕಗಳನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ. ಅಕ್ರಮ ಜಾಹೀರಾತು ಗಳನ್ನು ನಿಷೇಧಿಸುವ ನೆಪದಲ್ಲಿ ಕಾನೂನು ಬದ್ಧ ವಹಿವಾಟಿಗೆ ಬಿಬಿಎಂಪಿ ತಡೆಯೊಡ್ಡಿದೆ
ಜಾಹೀರಾತು ಪ್ರದರ್ಶನವು ಸಂವಿಧಾನದ ಪರಿಚ್ಛೇದ 19 (1) (ಅ) ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ವಾಪ್ತಿಗೆ ಬರುತ್ತದೆ. ಇಲ್ಲಿ ವಾಣಿಜ್ಯ ಉದ್ದೇಶದ ಜಾಹೀರಾತು ಪ್ರದರ್ಶನವನ್ನು ‘ವಾಣಿಜ್ಯ ಅಭಿವ್ಯಕ್ತಿ’ (ಕಮರ್ಷಿಯಲ್ ಸ್ಪೀಚ್) ಎಂದು ಪರಿಭಾಷಿಸಲಾಗಿದೆ. ಸಂವಿಧಾನದ ಈ ಪರಿಚ್ಛೇದದ ಪ್ರಕಾರ ಕಾನೂನುಬದ್ಧ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲು ಅವಕಾಶವಿಲ್ಲ. ಅಲ್ಲದೇ ಬಿಬಿಎಂಪಿಯ ಈ ಕ್ರಮ ಸಂವಿಧಾನದ ಪರಿಚ್ಛೇದ 21ರ ‘ಜೀವಿಸುವ ಹಕ್ಕಿನ’ ಉಲ್ಲಂಘನೆಯಾಗಿದೆ. ನಗರದಲ್ಲಿ ಸುಮಾರು 2 ಸಾವಿರ ಜಾಹೀರಾತು ಸಂಸ್ಥೆಗಳಿವೆ. ಸುಮಾರು ಸುಮಾರು 1.50 ಲಕ್ಷ ಕುಟುಂಬಗಳು ಈ ಉದ್ಯಮವನ್ನು ನೆಚ್ಚಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ವಹಿವಾಟು ಸ್ಥಗಿತಗೊಂಡಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ 1.50 ಲಕ್ಷ ಕುಟುಂಬಗಳು ಬೀದಿಗೆ ಬಿದ್ದಿವೆ. ಹಾಗಾಗಿ ಬಿಬಿಎಂಪಿಯ ಈ ನಿರ್ಣಯ ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದರು.
ಬಿಬಿಎಂಪಿ ಏನು ಹೇಳಿತ್ತು?
ಜಾಹೀರಾತುಗಳಿಂದ ನಗರ ಸೌಂದರ್ಯ ಹಾಳಾಗುತ್ತಿದೆ. ಅಲ್ಲದೇ ಇದು ಪರಿಸರ ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಅನಧೀಕೃತ ಜಾಹೀರಾತುಗಳ ಪ್ರದರ್ಶನಕ್ಕೆ ಕಡಿವಾಣ ಹಾಕಲು ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಹೀಗಾಗಿ, ಒಂದು ವರ್ಷದ ಮಟ್ಟಿಗೆ ನಗರದ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಜಾಹೀರಾತುಗಳನ್ನು ನಿಷೇಧಿಸಿ ಬಿಬಿಎಂಪಿ ಕೌನ್ಸಿಲ್ ಸಭೆ ನಿರ್ಣಯ ಕೈಗೊಂಡಿದೆ. ಈ ರೀತಿ ನಿರ್ಣಯ ಕೈಗೊಳ್ಳುವ ಅಧಿಕಾರ ಬಿಬಿಎಂಪಿಗೆ ಇದೆ. ಅಷ್ಟಕ್ಕೂ ಹೊಸ ಜಾಹೀರಾತು ನೀತಿ ತರುತ್ತಿರುವುದು ಅನಧೀಕೃತ ಜಾಹಿರಾತುಗಳ ನಿಷೇಧಕ್ಕೆ. ಆದರೆ, ಅರ್ಜಿದಾರರು ತಾವು ಅಧಿಕೃತ ಜಾಹೀರಾತುದಾರರು ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಬಿಎಂಪಿ ನಿರ್ಣಯದಿಂದ ಅವರಿಗೇನು ಸಮಸ್ಯೆ ಎಂದು ಬಿಬಿಎಂಪಿ ವಾದಿಸಿತ್ತು.