ಹುಬ್ಬಳ್ಳಿ: ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಸುಗ್ರಿವಾಜ್ಞೆ-2020 ರಾಜ್ಯದ ರೈತರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿರುವ ಲಕ್ಷಾಂತರ ಕುಟುಂಬಗಳಿಗೆ ಮಾರಕವಾಗಿದ್ದು, ಈ ನಿರ್ಣಯ ತಿರಸ್ಕರಿಸಬೇಕೆಂದು ಒತ್ತಾಯಿಸಲಾಯಿತು.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಸುಗ್ರಿವಾಜ್ಞೆ ಕುರಿತು ವಿಸ್ತೃತ ಚರ್ಚೆ ಬಳಿಕ ಇದು ರೈತರಿಗೆ, ಎಪಿಎಂಸಿ ವರ್ತಕರಿಗೆ, ಗ್ರಾಹಕರಿಗೆ ತೊಂದರೆಯಾಗಲಿದೆ ಎನ್ನುವ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದರು. ಎಪಿಎಂಸಿ ಕಾಯ್ದೆಗೆ ಮಾಡಿರುವ ಈ ತಿದ್ದುಪಡಿಯನ್ನು ಸರ್ವಾನುಮತದಿಂದ ವಿರೋಧಿಸಲಾಯಿತು. ಒಂದು ದೇಶ ಒಂದು ತೆರಿಗೆ ಎಂಬಂತೆ ಎಪಿಎಂಸಿಯಲ್ಲಿ ಯಾವುದೇ ಸೆಸ್/ಫೀ ಆಕರಿಸಬಾರದೆಂದು ಒತ್ತಾಯಿಸಲಾಯಿತು.
ಎಪಿಎಂಸಿ ಮಾರುಕಟ್ಟೆ ರೈತರು ಗ್ರಾಹಕರು, ಎಪಿಎಂಸಿ ವ್ಯಾಪಾರಸ್ಥರನ್ನೊಳಗೊಂಡ ಒಂದು ಬೃಹತ್ ಸಂಸ್ಥೆಯಾಗಿದ್ದು ರಾಜ್ಯ ಸುಮಾರು 164 ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಹೊಂದಿದೆ. ಇದರ ಮೇಲೆ ಅವಲಂಬಿತರಾದ ಲಕ್ಷಾಂತರ ನೌಕರರು ಹಾಗೂ ಕುಟುಂಬ ವರ್ಗದವರಿಗೆ ಜೀವನ ನಿರ್ವಹಿಸಲು ತೊಂದರೆಯಾಗುತ್ತದೆ. ಹೀಗಾಗಿ ಈ ಸುಗ್ರಿವಾಜ್ಞೆ ನಿರ್ಣಯವನ್ನು ತಿರಸ್ಕರಿಸಬೇಕೆಂದು ಒಕ್ಕೊರಲಿನಿಂದ ಸಭೆ ಸಮ್ಮತಿಸಿತು.
ಕೃಷಿ ಮಾರಾಟ ಮಂಡಳಿ ಹಿಂದಿನ ಪ್ರಧಾನ ವ್ಯವಸ್ಥಾಪಕ ಎಸ್. ಶಂಕರಮೂರ್ತಿ ಮಾತನಾಡಿ, 1968 ರಿಂದ ಇಲ್ಲಿಯವರೆಗೆ ಸುಮಾರು ಎಪಿಎಂಸಿ ಕಾಯ್ದೆಗಳಿಗೆ 29 ತಿದ್ದುಪಡಿ ಮಾಡಲಾಗಿದ್ದು, ಈಗ ಕೇಂದ್ರ ಸರಕಾರ 2020 ಜೂನ್ 5 ರಂದು ತರಾತುರಿಯಲ್ಲಿ ಸುಗ್ರೀವಾಜ್ಞೆ ಜಾರಿ ಮಾಡಿದೆ. ಕೇಂದ್ರ ಸರಕಾರ ಕೆಲ ಬಹುರಾಷ್ಟ್ರೀಯ ಕಂಪನಿಗಳಿಗೆ (ಎಂಎನ್‌ಸಿ) ಕಂಪನಿಗಳು ಓಲೈಸುವಲ್ಲಿ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಸುಗ್ರಿವಾಜ್ಞೆ ಜಾರಿ ಮಾಡಿರುವುದರಲ್ಲಿ ಸಂದೇಹವಿಲ್ಲ. ರಾಜ್ಯದ ಎಪಿಎಂಸಿ ಕಾನೂನು ದೇಶಕ್ಕೆ ಮಾದರಿಯಾಗಿದ್ದು, ಗ್ರಾಹಕರು ಹಾಗೂ ವರ್ತಕರ ನಡುವೆ ಅನ್ಯೋನ್ಯತೆಯಿದೆ. ಸುಗ್ರಿವಾಜ್ಞೆ ಜಾರಿ ಮಾಡುವ ಪೂರ್ವ ಚರ್ಚೆಗೆ ಅವಕಾಶ ಕಲ್ಪಿಸದೇ ನಿರ್ಣಯ ತೆಗೆದುಕೊಂಡಿರುವುದು ಸರಿಯಾದ ಕ್ರಮವಲ್ಲ ಎಂದರು.
ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ವಿ.ಪಿ.ಲಿಂಗನಗೌಡರ ಮಾತನಾಡಿ, ಕೇಂದ್ರ ಸರಕಾರ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಸುಗ್ರಿವಾಜ್ಞೆ 2020 ಜಾರಿ ಮಾಡುವುದರಿಂದ ರೈತರಿಗೆ ಹಾಗೂ ಎಪಿಎಂಸಿ ಮಾರುಕಟ್ಟೆಗಳಿಗೆ ಭವಿಷ್ಯ ಇಲ್ಲದಂತಾಗುತ್ತದೆ. ಇದು ಕೇವಲ ಬಹು ರಾಷ್ಟ್ರೀಯ ಕಂಪನಿಗಳು ಲಾಭ ಪಡೆಯುತ್ತವೆ ಎಂದು ಹೇಳಿದರು.
ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಕೆಸಿಸಿಐ ಮಾಜಿ ಅಧ್ಯಕ್ಷರಾದ ವಸಂತ ಲದವಾ, ಸುರೇಶ ಪಾಟೀಲ, ಗದಗ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಕೆ.ಕುರಡಗಿ, ರಾಣೆಬೆನ್ನೂರಿನ ಪಿ.ಡಿ.ಶಿರೂರ, ರೈತ ಪ್ರತಿನಿಧಿ ವಿಕಾಸ ಸೊಪ್ಪಿನ, ಕುಮಟಾ ಎಪಿಎಂಸಿ ಸದಸ್ಯ ಅರವಿಂದ ಪೈ, ವರ್ತಕರ ಸಂಘದ ಅಧ್ಯಕ್ಷ ಪಿ.ಡಿ.ಯಕಲಾಸಪೂರ, ಹೈದ್ರಾಬಾದ ಕರ್ನಾಟಕ ಚೇಂಬರ್ ಅಫ್ ಕಾಮರ್ಸ್‌ನ ಸಂತೋಷ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಜೊತೆ ಗೌರವ ಕಾರ್ಯದರ್ಶಿ ಉಮೇಶ ಗಡ್ಡದ, ಡಿ.ಎಸ್.ಗುಡ್ಡೋಡಗಿ, ರಮೇಶ ಎ.ಪಾಟೀಲ, ರಾಜಶೇಖರ ಬತ್ಲಿ ಇತರರು ಉಪಸ್ಥಿತರಿದ್ದರು.