Advertisement

ಬಡ್ತಿ ಹಿಂಪಡೆದ ಆದೇಶ ರದ್ದುಗೊಳಿಸಿ

12:10 PM Nov 10, 2017 | |

ಕಾರವಾರ: ರಾಜ್ಯದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕ ಹಾಗೂ ಉಪನ್ಯಾಸಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿ, ಕಾಯಂ ಆದ ಶಿಕ್ಷಕ, ಉಪನ್ಯಾಸಕರಿಗೆ, ತದನಂತರ ಸಕ್ರಮಗೊಂಡಿರುವ ಶಿಕ್ಷಕರಿಗೆ ಈಗಾಗಲೇ ಗುತ್ತಿಗೆ ಸೇವೆಗೆ ನೀಡಿದ 7 ವಾರ್ಷದ ವೇತನ ಬಡ್ತಿಗಳನ್ನು ಹಿಂಪಡೆಯಲು ಸರ್ಕಾರ ಇತ್ತೀಚೆಗೆ ಮಾಡಿದ ಆದೇಶ ರದ್ದುಪಡಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಸರ್ಕಾರವನ್ನು ಆಗ್ರಹಿಸಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಯಂಗೊಂಡ ಶಿಕ್ಷಕರ 7 ವರ್ಷಗಳ ವೇತನ ಬಡ್ತಿ ಹಿಂಪಡೆಯುವುದು
ಹಾಗೂ ಅದನ್ನು ಮರಳಿ ತುಂಬಿಸಿಕೊಳ್ಳುವ ಯತ್ನ ಅಮಾನವೀಯ ಎಂದರು. ಇದರ ಪರಿಣಾಮ 3 ಲಕ್ಷ ದಿಂದ 6 ಲಕ್ಷ ರೂ. ವನ್ನು ಸರ್ಕಾರಕ್ಕೆ ಶಿಕ್ಷಕರು, ಉಪನ್ಯಾಸಕರು ತುಂಬಬೇಕಾಗುತ್ತದೆ. ಅಲ್ಲದೇ ನಿವೃತ್ತಿ ವೇತನ ಫಿಕ್ಸ್‌ ಮಾಡುವಾಗ ನೇಮಕವಾದಾಗಿನ ಮೂಲ ವೇತನ ಆಧರಿಸುವ ಕಾರಣ ಅವರಿಗೆ ಪ್ರತಿ ತಿಂಗಳು ಮೂರು ಸಾವಿರ ನಿವೃತ್ತಿ ವೇತನ ಕಡಿಮೆಯಾಗಲಿದೆ. ನಿವೃತ್ತಿ ಅಂಚಿಗೆ
ಬಂದಿರುವ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರ ಜೊತೆ ಸರ್ಕಾರ ಚೆಲ್ಲಾಟವಾಡಬಾರದು ಎಂದರು.

1984-1987ರ ಅವಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರು ಈಗ ನಿವೃತ್ತಿ ಅಂಚಿನಲ್ಲಿದ್ದಾರೆ. ಕೆಲವರು ನಿವೃತ್ತಿ ಆಗಿದ್ದಾರೆ. ಅವರ 7 ವರ್ಷಗಳ ವೇತನ ಬಡ್ತಿ ವಾಪಸ್‌ ಪಡೆಯುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಈ ಸಂಬಂಧ ಶಿಕ್ಷಣ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಸಮಸ್ಯೆ ವಿವರಿಸಿದ್ದೇನೆ. ಆದರೂ ಕ್ರಮವಾಗಿಲ್ಲ ಎಂದು ಆರೋಪಿಸಿದರು.

ಗುತ್ತಿಗೆ ಆಧಾರದ ಮೇಲೆ ನೇಮಕವಾಗಿ ತದನಂತರ ಸಕ್ರಮಗೊಂಡಿರುವ ಶಿಕ್ಷಕರು ಹಾಗೂ ಉಪನ್ಯಾಸಕರು ನಿವೃತ್ತಿಯಾದ ಸಂದರ್ಭದಲ್ಲಿ ರಾಜ್ಯದ ಪ್ರಧಾನ ಅಕೌಂಟಂಟ್‌ ಜನರಲ್‌ರು 7 ವರ್ಷದ ಗುತ್ತಿಗೆ ಸೇವೆಗೆ ನೀಡಿದ ವಾರ್ಷಿಕ ವೇತನ ಬಡ್ತಿಯನ್ನು ಹಿಂಪಡೆದು ಸಕ್ರಮಗೊಂಡ ದಿನಾಂಕದಿಂದ ಮೂಲವೇತನವನ್ನು ಮರು ನಿಗದಿಪಡಿಸಿ ಸೇವಾ ಪಿಂಚಣಿ ನೀಡುವ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದ ನಿವೃತ್ತಿಯಾಗಿರುವ ಶಿಕ್ಷಕ ಹಾಗೂ ಉಪನ್ಯಾಸಕರಿಗೆ ಲಕ್ಷಾಂತರ ಆರ್ಥಿಕ ನಷ್ಟ ಉಂಟಾಗುವುದು. ಅಲ್ಲದೇ ಸೇವಾ ನಿವೃತ್ತಿ ಸಂದರ್ಭದಲ್ಲಿ ಗುತ್ತಿಗೆ ಅವಧಿಯಲ್ಲಿ ನೀಡಿದ ವಾರ್ಷಿಕ ವೇತನ ಬಡ್ತಿಗಳನ್ನು ಮರು ಪಾವತಿ ಮಾಡಲು ಆದೇಶ ನೀಡಿರುವುದು ಸರಿಯಲ್ಲ ಎಂದು ವಿ.ಪ. ಸದಸ್ಯ ಸಂಕನೂರು ಟೀಕಿಸಿದರು.

ಈ ಸಮಸ್ಯೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ಮತ್ತು ತಕ್ಷಣ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸುವುದಾಗಿ
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವರು ಭರವಸೆ ನೀಡಿದ್ದರು. ಆದರೆ ಈ ಸಂಬಂಧ ಹೋರಾಟ ರೂಪಿಸಬೇಕಾದ
ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next