ಮಹಾಲಿಂಗಪುರ: ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಮೀಪದ ಐತಿಹಾಸಿಕ ರನ್ನಬೆಳಗಲಿಯ ಬಂದಲಕ್ಷ್ಮೀಯ ಪ್ರಸಕ್ತ ವರ್ಷದ ಜಾತ್ರೆ (ಮಾ.28, 29ರಂದು ನಡೆಯುತ್ತಿದ್ದ) ರದ್ದುಗೊಳಿಸಲಾಗಿದೆ.
ಬಂದಲಕ್ಷ್ಮೀ ದೇವಸ್ಥಾನದಲ್ಲಿ ಮುಧೋಳ ತಹಶೀಲ್ದಾರ್ ಎಸ್.ಬಿ. ಬಾಡಗಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಪಪಂ ಸದಸ್ಯರು, ಜಾತ್ರಾ ಕಮಿಟಿ ಹಿರಿಯರು, ದಾಸೋಹ ಸಮಿತಿ ಹಿರಿಯರು ಮತ್ತು ಅಧಿ ಕಾರಿಗಳು ಚರ್ಚಿಸಿದ ಬಳಿಕ ರಾಜ್ಯ ಸರಕಾರದ ಆದೇಶದಂತೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪ್ರಸಕ್ತ ಸಾಲಿನ ಜಾತ್ರೆ ರದ್ದುಗೊಳಿಸಲು ತೀರ್ಮಾನಿಸಲಾಯಿತು.
ಮುಧೋಳ ತಾಪಂ ಇಒ ಎನ್.ವೈ. ಬಸರಿಗಿಡದ ಮಾತನಾಡಿ, ಕೋವಿಡ್ 19 ವೈರಸ್ ಕುರಿತು ನಿರ್ಲಕ್ಷ್ಯ ಮಾಡಿದ್ದಕ್ಕಾಗಿಯೇ ಇಟಲಿ ಮತ್ತು ಚೀನಾ ದೇಶಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅದಕ್ಕಾಗಿ ಮುಂಜಾಗೃತಿ ದೃಷ್ಟಿಯಿಂದ ಜಾತ್ರೆ ರದ್ದುಗೊಳಿಸುವುದು ಉತ್ತಮ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಧೋಳ ತಹಶೀಲ್ದಾರ್ ಎಸ್.ಬಿ. ಬಾಡಗಿ ಮಾತನಾಡಿ, ನಾವು ಸುರಕ್ಷೀತವಾಗಿ ಇರುವ ಸಲುವಾಗಿ ವಾರದ ಸಂತೆ, ಜಾತ್ರೆ-ಉತ್ಸವ, ಬಾರ್ ರೆಸ್ಟೋರೆಂಟ್, ದಾಬಾ, ಮನರಂಜನಾ ಕ್ಲಬ್ ಸೇರಿದಂತೆ ಎಲ್ಲವನ್ನು ಬಂದ್ ಮಾಡಿ. ಸರಕಾರದ ಆದೇಶ ಪಾಲಿಸುವ ಮೂಲಕ ನಮ್ಮ ರಕ್ಷಣೆ ಮತ್ತು ಭವಿಷ್ಯದ ಒಳತಿಗಾಗಿ ಸದ್ಯ ಜಾತ್ರೆಯನ್ನು ರದ್ದುಗೊಳಿಸಿ ಸಹಕರಿಸಿ. ಸಾಧ್ಯವಾದರೆ ಕೋವಿಡ್ 19 ಪ್ರಭಾವ ಕಡಿಮೆಯಾದ ನಂತರ ಅದ್ದೂರಿಯಾಗಿ ಜಾತ್ರೆ ನಡೆಸಿ ಎಂದು ಹಿರಿಯರು ಮತ್ತು ಪಟ್ಟಣದ ಜನರಲ್ಲಿ ವಿನಂತಿಸಿದರು.
ಜಾತ್ರಾ ಕಮೀಟಿ, ದಾಸೋಹ ಕಮೀಟಿ, ಪಪಂ ಸದಸ್ಯರು, ಪಟ್ಟಣದ ಹಿರಿಯರು, ಯುವಕರ ಪರವಾಗಿ ಹಿರಿಯರಾದ ಧರೆಪ್ಪ ಸಾಂಗಲಿಕರ ಮಾತನಾಡಿ, ಕೋವಿಡ್ 19 ವೈರಸ್ ಸಾಂಕ್ರಾಮಿಕ ರೋಗವಾಗಿದೆ. ಈ ಹಿನ್ನೆಲೆಯಲ್ಲಿ ದೇಶ ಮತ್ತು ರಾಜ್ಯದಲ್ಲಿನ ಪ್ರಸಿದ್ದ ಜಾತ್ರೆ-ಉತ್ಸವ ಮತ್ತು ದೇವಸ್ಥಾನಗಳನ್ನೇ ಬಂದ್ ಮಾಡಲಾಗುತ್ತಿದೆ. ನಾವು ಸಹ, ಸರಕಾರದ ಆದೇಶದಂತೆ ಪ್ರಸಕ್ತ ಸಾಲಿನ ಬಂದಲಕ್ಷ್ಮೀ ಜಾತ್ರೆ ರದ್ದುಗೊಳಿಸುತ್ತೇವೆ. ಶನಿವಾರದಿಂದಲೇ ದೇವಸ್ಥಾನಕ್ಕೆ ಬೀಗಹಾಕಿ ಸಹಕರಿಸುತ್ತೇವೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪಪಂ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಬೆಳಗಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರವೀಣ ಓಣಿಮಠ ಮಾತನಾಡಿದರು. ಸಭೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಕುಂದರಗಿ, ಪೊಲೀಸ್ ಇಲಾಖೆಯ ಕೆ.ಬಿ. ಮಾಂಗ, ಹಿರಿಯರಾದ ಮೋಹನರಾವ ಕುಲಕರ್ಣಿ, ಶಿವನಗೌಡ ಪಾಟೀಲ, ಅಶೋಕ ಸಿದ್ದಾಪುರ, ಸಿದ್ದುಗೌಡ ಪಾಟೀಲ, ರಾಮನಗೌಡ ಪಾಟೀಲ, ಲಕ್ಕಪ್ಪ ಹಾರೂಗೇರಿ, ಚಿಕ್ಕಪ್ಪ ನಾಯಕ, ಸಂಗನಗೌಡ ಪಾಟೀಲ, ಪಾಂಡಪ್ಪ ಸಿದ್ದಾಪುರ, ಶಿವನಗೌಡ ಪಾಟೀಲ, ಪಂಡಿತ ಪೂಜೇರಿ, ರಂಗಪ್ಪ ಒಂಟಗೋಡಿ, ಮಲ್ಲಪ್ಪ ಹೊಸಪೇಟಿ, ಈರಪ್ಪ ಕಿತ್ತೂರ, ಲಕ್ಷ್ಮಣ ಕಲ್ಲೋಳೆಪ್ಪಗೋಳ, ಮಹಾದೇವ ಮುರನಾಳ, ಮಹಾಲಿಂಗ ಲಾಗದವರ, ಮಹಾಲಿಂಗ ಪುರಾಣಿಕ, ಕಾಡಯ್ಯ ಗಣಾಚಾರಿ, ಆನಂದ ಪಾಟೀಲ, ಪ್ರವೀಣ ಪಾಟೀಲ ಸೇರಿದಂತೆ ಪಪಂ ಸದಸ್ಯರು, ಜಾತ್ರಾ ಕಮಿಟಿ ಹಿರಿಯರು, ಯುವಕರು ಭಾಗವಹಿಸಿದ್ದರು