ಬೆಂಗಳೂರು: ಪದವೀಧರ ಕ್ಷೇತ್ರದ ಹಳೆಯ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ರದ್ದುಪಡಿಸಿದ್ದು, ಪದವೀಧರರು ಮತ್ತೂಮ್ಮೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನ.7ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಸೂಚನೆ ಮೇರೆಗೆ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಪದವಿ ಪಡೆದು 2017ರ ನವೆಂಬರ್ 1ರ ವೇಳೆಗೆ ಮೂರು ವರ್ಷಗಳಾದವರು ಅಗತ್ಯ ದಾಖಲೆಗಳೊಂದಿಗೆ ನಮೂನೆ 18ನ್ನು ಪಾಲಿಕೆಗೆ ಸಲ್ಲಿಸಬೇಕು ಎಂದರು.
ಬೆಂಗಳೂರು ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳು ಸೇರುತ್ತವೆ. ನವೆಂಬರ್ 7ರೊಳಗೆ ಅರ್ಹ ಪದವೀಧರರು ಅರ್ಜಿ ಸಲ್ಲಿಸಬೇಕು. ಮತದಾರರ ಕರಡು ಪಟ್ಟಿಯನ್ನು ನವೆಂಬರ್ 21 ರಂದು ಪ್ರಕಟಿಸಿ, ನವೆಂಬರ್ 21 ರಿಂದ ಡಿಸೆಂಬರ್ 21ರವರೆಗೆ ಆಕ್ಷೇಪಣೆ ಮತ್ತು ಪಟ್ಟಿಗೆ ಸೇರಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಮತದಾರರ ಅಂತಿಮ ಪಟ್ಟಿಯನ್ನು ಜನವರಿ 19ರಂದು ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹಳೆಯ ಪಟ್ಟಿಯಲ್ಲಿ ಹೆಸರಿದೆ ಎಂಬ ಕಾರಣದಿಂದ ಕೆಲವರು ಅರ್ಜಿ ಸಲ್ಲಿಸಲು ಮುಂದಾಗದ ಹಿನ್ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿಯ ಕರಡು ಮತದಾರರ ಪಟ್ಟಿಯಲ್ಲಿ 7 ಸಾವಿರ ಪದವೀಧರರ ನೋಂದಣಿಯಾಗಿದ್ದರು. ಆದರೆ, ಈವರೆಗೆ ಮೂರು ಜಿಲ್ಲೆಗಳಿಂದ 3 ಸಾವಿರ ಪದವೀಧರರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ನಮೂನೆ 18ನ್ನು ಸಾರ್ವಜನಿಕರು ಪಾಲಿಕೆಯ ವಾರ್ಡ್ ಕಚೇರಿಗಳು, ಮತದಾರರ ನೋಂದಾಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಾಣಾಧಿಕಾರಿಗಳ ಕಚೇರಿ ಹಾಗೂ ಯಲಹಂಕ ಮತ್ತು ದಾಸರಹಳ್ಳಿ ಹೊರತು ಪಡಿಸಿ ಪಾಲಿಕೆಯ ಎಲ್ಲ ಜಂಟಿ ಆಯುಕ್ತರ ಕಚೇರಿಗಳಲ್ಲಿ ಸಲ್ಲಿಸಬಹಹುದಾಗಿದೆ. ಸಾರ್ವಜನಿಕರು ಅರ್ಜಿಗಳನ್ನು ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್ www.ceo.kar.nic.in ನಲ್ಲಿ ಪಡೆಯಬಹುದಾಗಿದೆ ಎಂದು ಹೇಳಿದರು.
ದೃಢೀಕರಣ ಅಗತ್ಯ: ಅರ್ಜಿ ಸಲ್ಲಿಸುವವರು ಅರ್ಜಿಗಳನ್ನು ಸಲ್ಲಿಸುವ ಮೊದಲು ತಮ್ಮಲ್ಲಿರುವ ಎಲ್ಲ ನಕಲು ದಾಖಲೆಗಳಿಗೆ ಸ್ವಯಂ ದೃಢೀಕರಣ ಅಥವಾ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಬೇಕು ಎಂದ ಆಯುಕ್ತರು, ಹತ್ತಾರು ಜನರ ಅರ್ಜಿಗಳನ್ನು ಒಬ್ಬರೇ ಸಲ್ಲಿಸಲು ಅವಕಾಶವಿಲ್ಲ. ಹೆಚ್ಚಿನ ಮಾಹಿತಿಯನ್ನು www.ceo.kar.nic.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ ಎಂದರು.