Advertisement
ಲೋಕಸಭಾ ಕ್ಷೇತ್ರದಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 4 , ಬಿಜೆಪಿ 4 ಸ್ಥಾನ ಪಡೆದಿವೆ. ಸಮಬಲದ ಹೋರಾಟದ ಭೂಮಿಕೆ ಇದ್ದರೂ ಸಚಿವ ದೇಶಪಾಂಡೆ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಅವರ ಮಗ ಪ್ರಶಾಂತ ದೇಶಪಾಂಡೆಗೂ ಟಿಕೆಟ್ ಬಯಸಿಲ್ಲ. ಅತ್ತ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಆಗಲಿ, ಅವರ ಮಗ ನಿವೇದಿತ ಆಳ್ವಾ ಆಗಲಿ ಟಿಕೆಟ್ ಕೇಳದಿರುವುದು ಅಚ್ಚರಿಯ ಬೆಳವಣಿಗೆ. ಕಾಂಗ್ರೆಸ್ ಚುನಾವಣೆಗೆ ಮುನ್ನವೇ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಸ್ಪಷ್ಟವಾಗಿದೆ. ಜಿಪಂ ಸೇರಿ ಹಲವು ಪಂಚಾಯತ್‌ಗಳು, ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಬಲವಿದೆ. ಆದರೂ ಚುನಾವಣೆಗೆ ಹಿಂದೇಟು ಹಾಕಿದ್ದು ಒಗಟಾಗಿದೆ. ಪ್ರಚಾರ ಆರಂಭಿಸಿದ ಬಿಜೆಪಿ, ಪಕ್ಕಾ ಲೆಕ್ಕಾಚಾರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಬಿಜೆಪಿ ಶಾಸಕರ ಪೈಕಿ ಕಾರವಾರ ಶಾಸಕಿ ರೂಪಾಲಿ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಶಿರಸಿಯಲ್ಲಿ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿ ಮತ ಕೇಳುತ್ತಿದ್ದಾರೆ. ಸಚಿವ ಅನಂತಕುಮಾರ್ ಹೆಗಡೆ ಆರನೇ ಬಾರಿ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾರೆ. ಕಿತ್ತೂರು, ಖಾನಾಪುರಗಳಲ್ಲಿ ಪಕ್ಷದ ಕಾರ್ಯಕರ್ತರ ಮೂಲಕ ಪ್ರಚಾರ ನಡೆಯುತ್ತಿದೆ. ಕುಮಟಾದ ವೈದ್ಯ ಜಿ.ಜಿ.ಹೆಗಡೆ ಸಹ ಲೋಕಸಭೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದು, ಪಕ್ಷ ಟಿಕೆಟ್ ನೀಡಿದರೆ ಮಾತ್ರ ಸ್ಪ ರ್ಧಿಸುವೆ ಎನ್ನುತ್ತಿದ್ದಾರೆ.
ಜೆಡಿಎಸ್ ಜಿಲ್ಲೆಯಲ್ಲಿ ಪ್ರಬಲವಾಗಿಲ್ಲ ಕಾರಣ ಕಾರ್ಯಕರ್ತರು, ಪದಾಧಿಕಾರಿಗಳಲ್ಲಿ ಹೊಂದಾಣಿಕೆಯಿಲ್ಲ. ಆದರೆ ಸಿಎಂ ಕುಮಾರಸ್ವಾಮಿ ರೈತರಿಗೆ ಮಾಡಿರುವ ನೆರವು ಮತ್ತು ಜಿಲ್ಲೆಗೆ ನೀಡಿದ ಕೊಡುಗೆ ಮುಂದಿಟ್ಟುಕೊಂಡು ಮತಯಾಚಿಸಬಹುದು. ಅರಣ್ಯ ಅತಿಕ್ರಮಣ ಹೋರಾಟಗಾರರ ಸಕ್ರಮಾತಿ ಬೇಡಿಕೆ ಇಟ್ಟು ವಕೀಲ ರವೀಂದ್ರ
ನಾಯ್ಕ ಕಾರವಾರ, ಕುಮಟಾದಲ್ಲಿ ಬೃಹತ್ ಪ್ರತಿಭಟನೆಗಳನ್ನು ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ. ಹಾಗಾಗಿ ಅವರು ಲೋಕಸಭೆಗೆ ಟಿಕೆಟ್ ಕೊಟ್ಟರೆ ನೋಡಿ ಬಿಡೋಣ ಎಂಬ ಮನಸ್ಸಲ್ಲಿದ್ದಾರೆ. ಬಿಜೆಪಿಯನ್ನು ಕಳೆದ ವಿಧಾನಸಭಾ
ಚುನಾವಣೆಯಲ್ಲಿ ತೊರೆದು ಪಕ್ಷೇತರರಾಗಿ ಸ್ಪ ರ್ಧಿಸಿದ್ದ ಕುಮಟಾದ ಸೂರಜ್ ನಾಯ್ಕ ಸೋನಿ ಜೆಡಿಎಸ್ ಲೋಕಸಭೆಗೆ ಟಿಕೆಟ್ ನೀಡಿದರೆ ನಿಲ್ಲುವ ಮನಸ್ಥಿತಿಯಲ್ಲಿದ್ದಾರೆ.