ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಪ್ರಸಕ್ತ ವಿತ್ತ ವರ್ಷದ 3ನೇ ತ್ತೈಮಾಸಿಕದಲ್ಲಿ ಶೇ.152ರ ಬೆಳವಣಿಗೆಯೊಂದಿಗೆ 318 ಕೋಟಿ ರೂ. ನಿವ್ವಳ ಲಾಭಕ್ಕೆ ತಲುಪಿದೆ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಿ. ಭಾರತಿ ಪ್ರಕಟಿಸಿದರು.
ಸೋಮವಾರ ಬ್ಯಾಂಕಿನ ಪ್ರಧಾನ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2017-18ನೇ ಸಾಲಿನ ಇದೇ ಅವಧಿಯಲ್ಲಿ ಬ್ಯಾಂಕು 126 ಕೋಟಿ ರೂ. ಲಾಭ ಗಳಿಸಿತ್ತು. ಆ ಸಂದರ್ಭದಲ್ಲಿ ಒಟ್ಟು ಲಾಭ 2831 ಕೋಟಿ ರೂ.ಗಳಾಗಿದ್ದರೆ, ಈ ಸಾಲಿನ ತ್ತೈಮಾಸಿಕಾಂತ್ಯದ ಲೆಕ್ಕಾಚಾರ ಪ್ರಕಾರ 2357 ಕೋಟಿ ರೂ. ಒಟ್ಟು ಲಾಭ ಗಳಿಸಿದೆ.
ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ 3814 ಕೋಟಿ ರೂ.ಗಳಾಗಿದ್ದರೆ, ಮುಂಗಡಗಳ ಮೇಲಿನ ಬಡ್ಡಿ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ.25.18 ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಬಂಡವಾಳದ ಮೇಲಿನ ಬಡ್ಡಿಯಲ್ಲಿ ಶೇ.9.83 ರಷ್ಟು ಏರಿಕೆಗೆ ಕಂಡಿರುವುದು ಬ್ಯಾಂಕಿನ ಆರೋಗ್ಯಕರ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದರು.
ಜಾಗತಿಕ ವ್ಯವಹಾರದಲ್ಲಿ ಒಟ್ಟಾರೆ 9.93 ಲಕ್ಷ ಕೋಟಿ ವಹಿವಾಟು ನಡೆಸಿ ವರ್ಷದಿಂದ ವರ್ಷಕ್ಕೆ ಬ್ಯಾಂಕು ಶೇ.13.20 ರಷ್ಟು ಅಭಿವೃದ್ಧಿಯನ್ನು ಕಾಣುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಲ ವಿತರಣೆಯಲ್ಲೂ ಪ್ರಗತಿ ಸಾಧಿಸಿರುವ ಬ್ಯಾಂಕು ಕೃಷಿ ಸಾಲ ಶೇ.11.20, ಎಂಎಸ್‌ಎಂಇ ಶೇ.11.47, ರಿಟೇಲ್ ಕ್ಷೇತ್ರದಲ್ಲಿ ಶೇ.24.95, ನೇರ ಗೃಹ ಸಾಲ ಶೇ.20.41, ವಾಹನ ಸಾಲ ಶೇ.34.40, ಶಿಕ್ಷಣ ಸಾಲ ಶೇ.6.01 ಹಾಗೂ ಇತರೆ ವೈಯಕ್ತಿಕ ಸಾಲ ನೀಡುವಿಕೆಯಲ್ಲಿ ಶೇ.36.15 ರಷ್ಟು ಮುಂದುವರಿಸಿ ಉತ್ತಮ ಸಾಧನೆ ಮಾಡಿದೆ.
ದೇಶೀಯ ವ್ಯವಹಾರದಲ್ಲಿ ಶೇ.32.23 ರಷ್ಟು ಪ್ರಗತಿ ಕಂಡಿರುವ ಬ್ಯಾಂಕಿನ ನಿವ್ವಳ ಬಡ್ಡಿ ಅಂತರ (ಎನ್‌ಐಎಂ) ಶೇ. 2.85 ಹಾಗೂ ಜಾಗತಿಕ ವ್ಯವಹಾರ ಶೇ. 2.65 ಬೆಳವಣಿಗೆಯಾಗಿದೆ. ನಿವ್ವಳ ಎನ್‌ಪಿಎ (ಅನುತ್ಪಾದಕ ಆಸ್ತಿ) ಪ್ರಮಾಣ ಸೆಪ್ಟೆಂಬರ್ 2018ರಲ್ಲಿನ ಶೇ. 6.54ಗೆ ಹೋಲಿಸಿದಾಗ, ಶೇ. 6.37ಕ್ಕೆ (17 ಬಿಪಿಎಸ್) ಇಳಿಕೆಯಾಗಿದೆ.
ಪ್ರಧಾನ ಮಂತ್ರಿ ಜನಧನ ಯೋಜನೆಯಲ್ಲಿ 71.09 ಲಕ್ಷ ಖಾತೆಗಳನ್ನು ತೆರೆಯಲಾಗಿ, ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ 2215 ಕೋಟಿ ರೂ. ಕ್ರೋಢೀಕರಿಸಲಾಗಿದೆ ಎಂದು ಪಿ.ವಿ. ಭಾರತಿ ವಿವರಿಸಿದರು.