ಬೆಂಗಳೂರು: ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ಬ್ಯಾಂಕಿನ 112ನೇ ಸಂಸ್ಥಾಪಕರ ದಿನ ಹಾಗೂ ಸಂಸ್ಥಾಪಕರಾದ ದಿ.ಅಮ್ಮೆಂಬಳ ಸುಬ್ಬರಾವ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಕೇಶ್ ಶರ್ಮಾ ಅವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ಕೆನರಾ ಬ್ಯಾಂಕ್ 112ನೇ ವರ್ಷಕ್ಕೆ ಕಾಲಿರಿಸಿದೆ.
ಸುಸಂದರ್ಭದಲ್ಲಿ ಬ್ಯಾಂಕ್ ಹುಟ್ಟಿಗೆ ಕಾರಣರಾದ ಅಮ್ಮೆಂಬಳ ಸುಬ್ಬರಾವ್ ಅವರ ಹುಟ್ಟುಹಬ್ಬವನ್ನೂ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು. ಸಂಸ್ಥಾಪಕರ ದಿನದ ಪ್ರಯುಕ್ತ ಗ್ರಾಹಕರು ಹಾಗೂ ಸಿಬ್ಬಂದಿಗಾಗಿ ಡಿಜಿಟಲ್ ಲೈಬ್ರರಿ, ಕ್ಯಾನರೆಟಿಸ್ ಆ್ಯಪ್, ಫಿಲ್ಡ್ ರಿಕವರಿ ಆ್ಯಪ್,
ರಿಟೇಲ್ ಲೋನ್ (ವಾಹನ), ಟ್ರಾಕಿಂಗ್ ಸಿಸ್ಟಂ, ರೆಗ್ಯುಲೇಟರಿ ಗೈಡನ್ಸ್ ಟ್ರಾಕಿಂಗ್ ಸಿಸ್ಟಂ, ಬಯೋಮೆಟ್ರಿಕ್ ಅಟೆಂಡೆನ್ಸ್, ಸಿಕೆವೈಜಿಆರ್, ನ್ಯೂ ಇಂಡಿಯಾ ಕೆನರಾ ಮೆಡಿಕ್ಲೇಮ್, ಕೆನರಾ ದಿಯಾ, ಕೆನರಾ ಡಿಜಿಸೈನ್, ಕೆನರಾ ಎಂ ಸರ್ವ್, ರುಪೆ ಕ್ರೆಡಿಟ್ ಕಾರ್ಡ್ ಮುಂತಾದ ಸೌಲಭ್ಯಗಳನ್ನು ಕೂಡ ಪರಿಚಯಿಸಿದರು.
ಸನ್ಮಾನ: ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಾಕಿ ಪಟು ನಿಕ್ಕಿನ್ ತಿಮ್ಮಯ್ಯ, ಭಾರತೀಯ ಮಹಿಳಾ ಕ್ರಿಕೆಟ್ ಕೋಚ್ ಕಲ್ಪನಾ ವೆಂಕಟಾಚಾರ್ಯ ಹಾಗೂ ವಿಶಿಷ್ಟಚೇತನ ಹಿರಿಯ ವ್ಯವಸ್ಥಾಪಕ ಪಾಲ್ ಮುದ್ದಾ ಅವರನ್ನು ಸನ್ಮಾನಿಸಿದರು. ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಿ. ಭಾರತಿ ಮತ್ತು ನಿರ್ದೇಶಕ ಎಂ.ಎನ್. ರಾವ್ ಅವರು ಬ್ಯಾಂಕಿನ ಏಳಿಗೆಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.